ADVERTISEMENT

ಪ್ರಿಯಾಂಕಾ ಬಟ್ಟೆ ಹಿಡಿದ ಪುರುಷ ಪೊಲೀಸ್‌ಗೆ ಎಷ್ಟು ಧೈರ್ಯ: ಬಿಜೆಪಿ ನಾಯಕಿ ಆಕ್ರೋಶ

ಪಿಟಿಐ
Published 5 ಅಕ್ಟೋಬರ್ 2020, 7:02 IST
Last Updated 5 ಅಕ್ಟೋಬರ್ 2020, 7:02 IST
ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಸಂತ್ರಸ್ಥೆ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಟ್ಟೆ ಹಿಡಿದಿದ್ದ ಪೊಲೀಸ್‌ ಸಿಬ್ಬಂದಿ - ಪಿಟಿಐ ಚಿತ್ರ
ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಸಂತ್ರಸ್ಥೆ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಟ್ಟೆ ಹಿಡಿದಿದ್ದ ಪೊಲೀಸ್‌ ಸಿಬ್ಬಂದಿ - ಪಿಟಿಐ ಚಿತ್ರ   

ಮುಂಬೈ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಸಂತ್ರಸ್ಥೆ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಟ್ಟೆ ಹಿಡಿದಿದ್ದ ಪೊಲೀಸ್‌ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರದ ಬಿಜೆಪಿ ಉಪಾಧ್ಯಕ್ಷೆ ಚಿತ್ರಾ ವಾಘ್‌ ಯೋಗಿ ಆದಿತ್ಯನಾಥ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಾಘ್ ಅವರ ನಿಲುವನ್ನು ಕಾಂಗ್ರೆಸ್‌ ನಾಯಕರು ಬೆಂಬಲಿಸಿದ್ದಾರೆ. ವಾಘ್‌ ಅವರು ಕೇಸರಿ ಪಾಳಯ ಸೇರಿದರೂ, ಅವರು ತಮ್ಮ ‘ಸಂಸ್ಕಾರ’ ಮರೆತಿಲ್ಲ ಎಂದು ಹೇಳಿದ್ದಾರೆ.

ಸಾಮೂಹಿಕ ಅತ್ಯಾಚಾರದ ನಂತರ ಮೃತಪಟ್ಟ ಯುವತಿಯ ಕುಟುಂಬವನ್ನು ಭೇಟಿಯಾಗಲು ಪ್ರಿಯಾಂಕಾ ಗಾಂಧಿ ಮತ್ತು ಅವರ ಸಹೋದರ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಶನಿವಾರ ಮಧ್ಯಾಹ್ನ ಹಾಥರಸ್‌ಗೆ ಕಾಲುನಡಿಗೆಯಲ್ಲಿ ತೆರಳುತ್ತಿದ್ದರು. ಈ ವೇಳೆ, ದೆಹಲಿ-ಉತ್ತರ ಪ್ರದೇಶ ಗಡಿಯ ಡಿಎನ್‌ಡಿ ಪ್ಲಾಜಾದ ಟೋಲ್‌ ಗೇಟ್‌ ಬಳಿ ಅವರನ್ನು ಪೊಲೀಸರು ತಡೆದಿದ್ದರು. ಆಗ ಪೊಲೀಸರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಗದ್ದಲದ ನಡುವೆಯೇ ಹೆಲ್ಮೆಟ್‌ಧಾರಿ ಪೊಲೀಸ್‌ ಸಿಬ್ಬಂದಿಯೊಬ್ಬರು ಪ್ರಿಯಾಂಕಾ ಗಾಂಧಿ ಅವರ ಬಟ್ಟೆಯನ್ನು ಹಿಡಿದಿದ್ದರು. ಈ ಸನ್ನಿವೇಶದ ವಿಡಿಯೊ, ಫೋಟೊಗಳು ಈಗಾಗಲೇ ಭಾರಿ ವೈರಲ್‌ ಆಗಿವೆ.

ADVERTISEMENT

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಚಿತ್ರ ವಾಘ್‌, ‘ರಾಜಕೀಯ ನಾಯಕಿಯೊಬ್ಬರ ಬಟ್ಟೆಯ ಮೇಲೆ ಪುರುಷ ಪೊಲೀಸ್ ಅಧಿಕಾರಿಯೊಬ್ಬ ಕೈ ಹಾಕಲು ಎಷ್ಟು ಧೈರ್ಯ! ಪೊಲೀಸರು ಯಾವಾಗಲೂ ತಮ್ಮ ಮಿತಿಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿಯನ್ನು ನಂಬುವ ಯೋಗಿ ಆದಿತ್ಯನಾಥ್ ಅವರು ಆ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರ ಬಟ್ಟೆ ಹಿಡಿದಿರುವ ಫೋಟೊವನ್ನು ಚಿತ್ರಾ ಅವರು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರ ಯುವ ಕಾಂಗ್ರೆಸ್ ಅಧ್ಯಕ್ಷ ಸತ್ಯಜೀತ್ ತಂಬೆ ಅವರು ಚಿತ್ರಾ ಅವರ ನಿಲುವನ್ನು ಶ್ಲಾಘಿಸಿದ್ದಾರೆ. ಬಿಜೆಪಿ ಸೇರುವ ಸಲುವಾಗಿ ಕಳೆದ ವರ್ಷ ಎನ್‌ಸಿಪಿ ತೊರೆದಿದ್ದ ಚಿತ್ರಾ ಅವರು, ಬಿಜೆಪಿ ಸೇರಿದರೂ ‘ಸಂಸ್ಕಾರ’ಕ್ಕೆ ಬದ್ಧರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.