ADVERTISEMENT

ಮುಂಬೈ–ಬೆಂಗಳೂರು ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸಲು ಚಿಂತನೆ

ಪಿಟಿಐ
Published 27 ಜುಲೈ 2021, 19:30 IST
Last Updated 27 ಜುಲೈ 2021, 19:30 IST
ಉಪಮುಖ್ಯಮಂತ್ರಿ ಅಜಿತ್‌ ಪವಾರ್‌
ಉಪಮುಖ್ಯಮಂತ್ರಿ ಅಜಿತ್‌ ಪವಾರ್‌    

ಪುಣೆ: ‌ಪ್ರವಾಹದ ಕಾರಣದಿಂದ ವಾಹನಗಳ ಮುಕ್ತ ಸಂಚಾರಕ್ಕೆ ತೊಂದರೆಯಾಗುವುದನ್ನು ತಡೆಯಲು ಮುಂಬೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲ್ಲಾಪುರದ ಬಳಿ ಮೇಲ್ಸೇತುವೆ ನಿರ್ಮಾಣ ಮಾಡಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ.

ಕಳೆದ ವಾರ ಭಾರಿ ಮಳೆಯಿಂದ ಕೊಲ್ಲಾಪುರದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಮಂಗಳವಾರ ಭೇಟಿ ನೀಡಿದ್ದರು. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆಮೇಲ್ಸೇತುವೆ ನಿರ್ಮಾಣ ಕುರಿತಂತೆ ಮಾತುಕತೆ ನಡೆಸುವುದಾಗಿ ಪವಾರ್‌ ಹೇಳಿದರು.

ಪಂಚಗಂಗಾ ನದಿಗೆ ಹರಿಯುವ ತೊರೆಗಳ ಮೇಲಿನ ಒತ್ತುವರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ವೇಳೆ ಸೂಚಿಸಿದರು.

ADVERTISEMENT

ಬೆಂಗಳೂರು–ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹದಿಂದಾಗಿ ನಾಲ್ಕು ದಿನಗಳಿಂದ ಸಂಚಾರ ಸ್ಥಗಿತವಾಗಿತ್ತು. ಸೋಮವಾರದಿಂದ ಸಂಚಾರ ಪುನರಾರಂಭವಾಗಿದೆ. ಲಾರಿ ಮತ್ತು ಕಾರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ವಾಹನಗಳು ಅಲ್ಲಿ ಸಿಲುಕಿಕೊಂಡಿದ್ದವು.

‘ರಾಷ್ಟ್ರೀಯ ಹೆದ್ದಾರಿ ಯಾವಾಗಲೂ ವಾಹನಗಳ ಸಂಚಾರಕ್ಕೆ ಮುಕ್ತವಾಗಿರಬೇಕು. ಪುಣೆ (ಮುಂಬೈ)–ಬೆಂಗಳೂರು ಹೆದ್ದಾರಿಯಲ್ಲಿ ಪ್ರವಾಹದ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸುವ ಬಗ್ಗೆ ಗಡ್ಕರಿ ಅವರೊಡನೆ ಮಾತುಕತೆ ನಡೆಸುತ್ತೇನೆ’ ಎಂದು ಅವರು ಹೇಳಿದರು.

‘ಕರ್ನಾಟಕದ ಆಲಮಟ್ಟಿ ಜಲಾಶಯದಿಂದಾಗಿ ಸಾಂಗ್ಲಿ ಮತ್ತು ಕೊಲ್ಲಾಪುರದಲ್ಲಿ ಸಾಮಾನ್ಯವಾಗಿ ಪ್ರವಾಹ ಉಂಟಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಸಾಂಗ್ಲಿ–ಕೊಲ್ಲಾಪುರದಲ್ಲಿ ಪ್ರವಾಹ ಉಂಟಾಗಲು ಆಲಮಟ್ಟಿ ಜಲಾಶಯ ಕಾರಣ ಅಲ್ಲ ಎಂದು ಈ ಹಿಂದೆ ಅಧಿಕಾರದಲ್ಲಿದ್ದ (ಬಿಜೆಪಿ ನೇತೃತ್ವ) ಸರ್ಕಾರವು ರಚಿಸಿದ್ದ ಸಮಿತಿಯು ವರದಿ ನೀಡಿತ್ತು’ ಎಂದು ಪವಾರ್‌ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.