ADVERTISEMENT

ಬುಲೆಟ್‌ ರೈಲು ಯೋಜನೆ– ಮರುಪರಿಶೀಲನೆಗೆ ಆದೇಶ: ಉದ್ಧವ್‌

ಪಿಟಿಐ
Published 2 ಡಿಸೆಂಬರ್ 2019, 18:05 IST
Last Updated 2 ಡಿಸೆಂಬರ್ 2019, 18:05 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ: ಮುಂಬೈ–ಅಹಮದಾಬಾದ್‌ ಬುಲೆಟ್‌ ರೈಲು ಸೇರಿದಂತೆ ಮಹಾರಾಷ್ಟ್ರದಲ್ಲಿ ನಡೆದಿರುವ ಅಭಿವೃದ್ಧಿ ಯೋಜನೆಗಳ ಮರುಪರಿಶೀಲನೆಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆದೇಶಿಸಿದ್ದಾರೆ.

ಬುಲೆಟ್‌ ರೈಲು ಯೋಜನೆ ಭೂಸ್ವಾಧೀನಕ್ಕೆ ಸಂಬಂಧಿಸಿ ರೈತರು ಮತ್ತು ಬುಡಕಟ್ಟು ಜನಾಂಗದವರಿಂದ ತೀವ್ರ ವಿರೋಧ ಎದುರಿಸುತ್ತಿದೆ.

‘ಬುಲೆಟ್‌ ರೈಲು ಯೋಜನೆ ಬಗ್ಗೆ ಮರುಪರಿಶೀಲನೆ ನಡೆಸಲಿದ್ದೇವೆ. ಈ ಯೋಜನೆಗೆ ತಡೆ ನೀಡಿದ್ದೇವೆಯೇ? ಇಲ್ಲವಲ್ಲ. ಜನಸಾಮಾನ್ಯರ ಸರ್ಕಾರ ಈಗ ಮಹಾರಾಷ್ಟ್ರದಲ್ಲಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲಾಗುವುದು’ ಎಂದು ಉದ್ಧವ್‌ ಹೇಳಿದ್ದಾರೆ.

ADVERTISEMENT

‘ರಾಜ್ಯ ಸರ್ಕಾರ ಸುಮಾರು ₹5 ಲಕ್ಷ ಕೋಟಿ ಸಾಲ ಹೊಂದಿದ್ದರೂ, ರೈತರಿಗೆ ಬೇಷರತ್ತಾಗಿ ಸಾಲ ಮನ್ನಾ ಮಾಡಲು ಬದ್ಧವಾಗಿದೆ’ ಎಂದ ಅವರು, ದ್ವೇಷದ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ರಾಜ್ಯ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಇಂಥ ಸಂದರ್ಭದಲ್ಲಿ ಬುಲೆಟ್‌ ರೈಲು ಯೋಜನೆಯ ಹೊರೆಯನ್ನು ಜನರ ಮೇಲೆ ಹೇರುವುದಕ್ಕೆ ಪಕ್ಷದ ವಿರೋಧವಿದೆ’ ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.

ಭಾರತದ ಮೊದಲ ಬುಲೆಟ್‌ ರೈಲು ಇದಾಗಿದ್ದು, ಒಟ್ಟು 508.17 ಕಿ.ಮೀ. ಉದ್ದ ಮಾರ್ಗದ ಯೋಜನೆ ಹೊಂದಿದೆ. ಮಹಾರಾಷ್ಟ್ರದಲ್ಲಿ 155.76 ಕಿ.ಮೀ., ಗುಜರಾತ್‌ನಲ್ಲಿ 348.04 ಕಿ.ಮೀ. ಹಾಗೂ ದಾದ್ರ ಮತ್ತು ನಗರ ಹವೇಲಿ ವ್ಯಾಪ್ತಿಯಲ್ಲಿ 4.3 ಕಿ.ಮೀ. ಉದ್ದದ ಮಾರ್ಗ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿಯ ಬುಲೆಟ್‌ ರೈಲು ಯೋಜನೆಯನ್ನು ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಅಂದರೆ,2022ರ ಆಗಸ್ಟ್‌ 15 ರೊಳಗೆ ಪೂರ್ಣಗೊಳಿಸಲು ಗಡುವು ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.