ADVERTISEMENT

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಆಗಸದಿಂದ ಬಿದ್ದ ಅಪರಿಚಿತ ವಸ್ತು: ಇಸ್ರೋ ಪರಿಶೀಲನೆ

ಪಿಟಿಐ
Published 8 ಏಪ್ರಿಲ್ 2022, 12:29 IST
Last Updated 8 ಏಪ್ರಿಲ್ 2022, 12:29 IST
ಆಗಸದಿಂದ ಬಿದ್ದ ವಸ್ತುವಿನೊಂದಿಗೆ ಸ್ಥಳೀಯರು (ಪಿಟಿಐ ಚಿತ್ರ)
ಆಗಸದಿಂದ ಬಿದ್ದ ವಸ್ತುವಿನೊಂದಿಗೆ ಸ್ಥಳೀಯರು (ಪಿಟಿಐ ಚಿತ್ರ)   

ನಾಗಪುರ: ಪೂರ್ವ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ವಾರದ ಹಿಂದೆ ಆಗಸದಿಂದ ಬಿದ್ದಿದೆ ಎನ್ನಲಾದ ಅಪರಿಚಿತ ವಸ್ತುಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ತಂಡವೊಂದು ಶುಕ್ರವಾರ ಪರಿಶೀಲಿಸಿತು.

ಏಪ್ರಿಲ್ 2ರ ಸಂಜೆ ಉತ್ತರ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ಬೆಂಕಿಯ ಉಂಡೆಯೊಂದು ಆಗಸದಲ್ಲಿ ಹಾದು ಹೋಗಿದ್ದನ್ನು ಅನೇಕರು ಕಂಡಿದ್ದರು. ಹೀಗಿರುವಾಗಲೇ, ಚಂದ್ರಾಪುರ ಜಿಲ್ಲೆಯ ಸಿಂಧೇವಾಹಿ ತಾಲೂಕಿನಲ್ಲಿ ಲೋಹದ ವೃತ್ತಾಕಾರದ ವಸ್ತು ಮತ್ತು ಆರು ಸಿಲಿಂಡರ್ ರೀತಿಯ ವಸ್ತುಗಳು ಪತ್ತೆಯಾಗಿವೆ.

ಕೆಲವು ತಜ್ಞರು ಇವು ಸುಟ್ಟುಹೋದ ಬೂಸ್ಟರ್ ರಾಕೆಟ್‌ನ ಭಾಗಗಳಾಗಿರಬಹುದು ಎಂದು ಊಹಿಸಿದ್ದಾರೆ. ಉಪಗ್ರಹಗಳನ್ನು ಉಡಾವಣೆ ಮಾಡಲು ಬೂಸ್ಟರ್‌ ರಾಕೆಟ್‌ಗಳನ್ನು ಬಳಸಲಾಗುತ್ತದೆ.

ADVERTISEMENT
ಆಗಸದಿಂದ ಬಿದ್ದಿರುವ ಮತ್ತೊಂದು ವಸ್ತು (ಪಿಟಿಐ ಚಿತ್ರ)

ಸಂಪೂರ್ಣ ಮಾಹಿತಿಯಿಲ್ಲದೆ ವಸ್ತುಗಳ ಸ್ವರೂಪದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ನಾಗ್ಪುರದ ‘ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ’ ಅಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್ 2 ರಂದು ರಾತ್ರಿ 7.50 ರ ಸುಮಾರಿಗೆ ಲಾಡ್ಬೋರಿ ಗ್ರಾಮದ ಜಮೀನಿನಲ್ಲಿ ಕಬ್ಬಿಣದ ವೃತ್ತಾಕಾರದ ವಸ್ತು ಪತ್ತೆಯಾಗಿದೆ. ಮರುದಿನ ಬೆಳಿಗ್ಗೆ ಸಿಂಧೇವಾಹಿ ತಾಲೂಕಿನ ಪವನ್‌ಪರ್ ಗ್ರಾಮದಲ್ಲಿ ಸಿಲಿಂಡರ್ ರೀತಿಯ ವಸ್ತು ಸಿಕ್ಕಿದೆ. ನಂತರ ಈ ಪ್ರದೇಶದಲ್ಲಿ ಇನ್ನೂ ಐದು ಸಿಲಿಂಡರ್‌ಗಳು ಪತ್ತೆಯಾಗಿವೆ.

ಖಗೋಳಶಾಸ್ತ್ರದ ಅಧ್ಯಯನದಲ್ಲಿ ತೊಡಗಿರುವ ‘ಸ್ಕೈವಾಚ್‌’ ಮುಖ್ಯಸ್ಥ ಸುರೇಶ್ ಚೋಪಾನೆ ಎಂಬುವವರು ಮತ್ತು ಇಬ್ಬರು ಇಸ್ರೋ ವಿಜ್ಞಾನಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಸಿಂಧೇವಾಹಿ ಪೊಲೀಸ್ ಠಾಣೆಯಲ್ಲಿ ಇದ್ದ ವಸ್ತುಗಳನ್ನು ಪರಿಶೀಲಿಸಿದರು. ಇಸ್ರೋ ತಂಡವು ಹೆಚ್ಚಿನ ಪರೀಕ್ಷೆಗಾಗಿ ವಸ್ತುಗಳನ್ನು ಸುಪರ್ದಿಗೆ ಪಡೆಯುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.