
ಮಹಾಕುಂಭಮೇಳ ಹಿನ್ನೆಲೆಯಲ್ಲಿ ಹೆಚ್ಚಿನ ರೈಲುಗಳಲ್ಲಿ ದಟ್ಟಣೆ ಹೆಚ್ಚಿದ್ದು, ಭಾನುವಾರ ವಾರಣಾಸಿ ರೈಲ್ವೆ ನಿಲ್ದಾಣದಲ್ಲಿ ರೈಲು ಏರಲು ಪ್ರಯಾಣಿಕರು ಪರಿತಪಿಸಿದ ಚಿತ್ರಣ ಇದು.
–ಪಿಟಿಐ ಚಿತ್ರ
ನವದೆಹಲಿ: ಮಹಾಕುಂಭಮೇಳಕ್ಕಾಗಿ ಪ್ರಯಾಗರಾಜ್‌ಗೆ ದೊಡ್ಡ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭೇಟಿ ನೀಡಲಿರುವ ನಿರೀಕ್ಷೆಯಲ್ಲಿ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ದಟ್ಟಣೆ ನಿರ್ವಹಿಸಲು ಕಟ್ಟೆಚ್ಚರ ವಹಿಸಬೇಕು ಎಂದು ರೈಲ್ವೆ ಇಲಾಖೆಯು ಸೂಚಿಸಿದೆ.
ಮಹಾಕುಂಭಮೇಳವು ನಿಗದಿಯಂತೆ ಶಿವರಾತ್ರಿ ಹಬ್ಬವಾದ ಫೆಬ್ರುವರಿ 26ರಂದು ಅಂತ್ಯವಾಗಲಿದೆ. ಬಾಕಿ ಉಳಿದಿರುವ ದಿನಗಳಲ್ಲಿ ಪ್ರಯಾಗರಾಜ್‌ಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರಬಹುದು ಎಂದು ಉತ್ತರ ಪ್ರದೇಶ ಸರ್ಕಾರವು ಅಂದಾಜು ಮಾಡಿದೆ.
ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಕಟ್ಟೆಚ್ಚರ ವಹಿಸಿದೆ. ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ ರಾಜ್ಯಗಳ ನಿಲ್ದಾಣಗಳು ಸೇರಿ ಪ್ರಮುಖ ನಿಲ್ದಾಣಗಳಲ್ಲಿ ದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದೆ.
ದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ನಡೆದ ಕಾಲ್ತುಳಿತದಲ್ಲಿ 18 ಜನರು ಮೃತಪಟ್ಟ ಹಿಂದೆಯೇ ಈ ನಿರ್ದೇಶನ ನೀಡಲಾಗಿದೆ. ಉತ್ತರ ಪ್ರದೇಶದ ಅಧಿಕಾರಿಗಳ ಪ್ರಕಾರ, ಈವರೆಗೆ 50ಕೋಟಿಗೂ ಅಧಿಕ ಭಕ್ತರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ತಪ್ಪದ ನೂಕುನುಗ್ಗಲು: ದೆಹಲಿ ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ನಂತರವೂ ಉತ್ತರ ಪ್ರದೇಶ ಮತ್ತು ಬಿಹಾರದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಇತ್ತು.
ನವದೆಹಲಿ ನಿಲ್ದಾಣದಲ್ಲಿ ಪ್ಲಾಟ್‌ಫಾರಂ 16ರಿಂದಲೇ ಪ್ರಯಾಗರಾಜ್‌ಗೆ ತೆರಳುವ ರೈಲುಗಳು ನಿರ್ಗಮಿಸಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ಅಜ್ಮೇರಿ ಗೇಟ್ ಮೂಲಕ ಪ್ರವೇಶಿಸಬೇಕು. ಇತರೆ ಪ್ಲಾಟ್‌ಫಾರಂಗಳಿಂದ ನಿಗದಿಯಂತೆ ರೈಲು ಸಂಚಾರ ಇರಲಿದೆ ಎಂದಿದ್ದಾರೆ.
ಪ್ರಯಾಗರಾಜ್‌ನಲ್ಲಿ ದಟ್ಟಣೆ; ಶಾಲೆಗಳಿಗೆ ರಜೆ ಘೋಷಣೆ
ಲಖನೌ: ಮಹಾಕುಂಭಮೇಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು ಪ್ರಯಾಗರಾಜ್‌ನಲ್ಲಿ ಸಂಚಾರ ದಟ್ಟಣೆ ಮೂಡಿದೆ. ಜಿಲ್ಲಾಡಳಿತವು ಮುಂಜಾಗ್ರತೆಯಾಗಿ ಎಲ್ಲ ಶಾಲೆಗಳಿಗೆ ರಜೆಯನ್ನು ಘೋಷಿಸಿದೆ.
ದಟ್ಟಣೆ ನಿರ್ವಹಣೆಗೆ ಯೋಧರ ನೆರವು ಪಡೆದಿದ್ದು ನಗರಕ್ಕೆ ವಾಹನಗಳ ಪ್ರವೇಶ ನಿರ್ಬಂಧಿಸಿದ್ದು ಭಕ್ತರು ಕಿಲೋ ಮೀಟರ್‌ಗಟ್ಟಲೆ ನಡೆಯಬೇಕಾದ ಸ್ಥಿತಿ ಇದೆ. ಅಧಿಕಾರಿಗಳ ಪ್ರಕಾರ ಮಧ್ಯಪ್ರದೇಶ ದೆಹಲಿ ಹರಿಯಾಣ ಹಾಗೂ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ವಾಹನಗಳಲ್ಲಿಯೇ ಬರುತ್ತಿದ್ದಾರೆ.
3 ಕಿಲೋಮೀಟರ್ ಕ್ರಮಿಸಲು 4 ಗಂಟೆ ಬೇಕಾಗಿದೆ ಎಂದು ಭಕ್ತರೊಬ್ಬರ ಹೇಳಿದರು. ಕಾಲ್ತುಳಿತ ತಡೆಯುವ ಕ್ರಮವಾಗಿ ಸಂಗಮ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಭಕ್ತರು ಅಯೋಧ್ಯೆ ವಾರಣಾಸಿಗೂ ಭೇಟಿ ನೀಡುತ್ತಿದ್ದಾರೆ. ಅಯೋಧ್ಯೆಯಲ್ಲಿಯೂ ಪಟ್ಟಣದ ಹೊರಗೆ ವಾಹನಗಳಿಗೆ ನಿರ್ಬಂಧ ವಿದಿಸಿದೆ. ಭಕ್ತರು ನಡೆದೇ ಬರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.