ADVERTISEMENT

Mahakumbh Mela 2025 | ಭಕ್ತರ ಮಹಾಸಂಗಮ; ಮೊದಲ ‘ಶಾಹೀ ಸ್ನಾನ’ ಇಂದು

​ಪ್ರಜಾವಾಣಿ ವಾರ್ತೆ
ಪಿಟಿಐ
Published 14 ಜನವರಿ 2025, 0:30 IST
Last Updated 14 ಜನವರಿ 2025, 0:30 IST
<div class="paragraphs"><p>ಪವಿತ್ರ ಸ್ನಾನ ಮಾಡಿದ ಭಕ್ತರು ಸಂಗಮಕ್ಕೆ<br>ಆರತಿ ಬೆಳಗಿದರು</p></div>

ಪವಿತ್ರ ಸ್ನಾನ ಮಾಡಿದ ಭಕ್ತರು ಸಂಗಮಕ್ಕೆ
ಆರತಿ ಬೆಳಗಿದರು

   

ಪಿಟಿಐ ಚಿತ್ರ

ಮಹಾಕುಂಭ ನಗರ/ ಲಖನೌ (ಉತ್ತರ ಪ್ರದೇಶ): ಆಧ್ಯಾತ್ಮಿಕತೆ ಮತ್ತು ನಂಬಿಕೆ, ಸಂಸ್ಕೃತಿ ಮತ್ತು ಧರ್ಮ ಹಾಗೂ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನವು ಪ್ರಯಾಗ್‌ರಾಜ್‌ನ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಕೂಡುವ ಸ್ಥಳ) ಒಂದಾಗಿ ಬೆಸೆದುಕೊಂಡಿದೆ.

ADVERTISEMENT

12 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸೋಮವಾರ ವಿಧ್ಯುಕ್ತ ಆರಂಭ ಲಭಿಸಿದ್ದು, ಮುಂದಿನ 45 ದಿನಗಳಲ್ಲಿ 40 ಕೋಟಿಗೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಹಿಂದೂ ಸಂತರ ವೇಷ ಧರಿಸಿದ ವಿದೇಶಿ ಭಕ್ತರ ಉಪಸ್ಥಿತಿಯು ಕುಂಭಮೇಳದ ಆಕರ್ಷಣೆ ಮಾತ್ರವಲ್ಲದೆ, ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವದ ದೈವಿಕ ಪ್ರಭೆಯನ್ನು ಹೆಚ್ಚಿಸಿದೆ.

ಫ್ರಾನ್ಸ್‌, ಅಮೆರಿಕ, ದಕ್ಷಿಣ ಆಫ್ರಿಕಾ, ರಷ್ಯಾ, ಉಕ್ರೇನ್‌, ಬ್ರೆಜಿಲ್, ಇಟಲಿ ಮತ್ತು ಸ್ಪೇನ್‌ ಒಳಗೊಂಡಂತೆ ವಿವಿಧ ದೇಶಗಳ ಪುರುಷ ಹಾಗೂ ಮಹಿಳಾ ಭಕ್ತರು ಸೋಮವಾರ ಪವಿತ್ರ ಸ್ನಾನ ಮಾಡಿದರು.

ಈಗ ‘ಬಾಬಾ ಮೋಕ್ಷಪುರಿ’ ಎಂಬ ಹೆಸರಿನಿಂದ ಕರೆಯಲಾಗುವ ಅಮೆರಿಕದ ಮಾಜಿ ಸೈನಿಕ ಮೈಕಲ್‌, ಇದೇ ಮೊದಲ ಬಾರಿ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದರು.

‘ನಾನು ಎಲ್ಲರಂತೆಯೇ ಕುಟುಂಬವನ್ನು ಹೊಂದಿರುವ ಸಾಮಾನ್ಯ ವ್ಯಕ್ತಿಯಾಗಿದ್ದೆ. ಆದರೆ ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ಅರಿತುಕೊಂಡೆ. ಮೋಕ್ಷಕ್ಕಾಗಿ ಹುಡುಕಾಟ ಪ್ರಾರಂಭಿಸಿದೆ. ಈಗ ಸನಾತನ ಧರ್ಮದ ಪ್ರಚಾರಕ್ಕೆ ಜೀವನ ಮುಡಿಪಾಗಿಟ್ಟಿದ್ದೇನೆ’ ಎಂದರು.

‘ಇದೊಂದು ಅದ್ಭುತ ಕ್ಷಣ. ಇಂತಹ ಕಾರ್ಯಕ್ರಮವನ್ನು ಹಿಂದೆಂದೂ ನೋಡಿಯೇ ಇಲ್ಲ’ ಎಂದು ಸ್ಪೇನ್‌ನ ಕ್ರಿಸ್ಟಿನಾ ಪ್ರತಿಕ್ರಿಯಿಸಿದರು.

‘ನಾನು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದು, ಇದೊಂದು ಅಪೂರ್ವ ಅನುಭವವಾಗಿದೆ. ಸಂಗಮದಲ್ಲಿ ಸ್ನಾನ ಮಾಡಲು ಇಷ್ಟೊಂದು ಜನ ಇಲ್ಲಿಗೆ ಬಂದಿದ್ದಾರೆ ಎಂದರೆ ನಂಬುವುದು ಕಷ್ಟ. ಅದನ್ನು ನಂಬಲು ಇಲ್ಲಿಗೆ ಬಂದು ನೋಡಬೇಕು’ ಎಂದು ರಷ್ಯಾದಿಂದ ಬಂದ ಮಹಿಳೆಯೊಬ್ಬರು ಹೇಳಿದರು. ಅವರು ಸಂಗಮದಲ್ಲಿ ಪವಿತ್ರ ಸ್ನಾನವನ್ನೂ ಮಾಡಿದರು.

13 ಆಖಾಡಾಗಳು ಭಾಗಿ:

ಕುಂಭ ಮೇಳದಲ್ಲಿ ಸಾಧು ಸಂತರ 13 ಆಖಾಡಾಗಳು (ಗುಂಪು) ಭಾಗವಹಿಸಿವೆ. ನಾಗಾ–ಸಾಧುಗಳು, ಅಘೋರಿಗಳು ಸೇರಿದಂತೆ ದೇಶದಾದ್ಯಂತ ವಿವಿಧ ರಾಜ್ಯಗಳ ಸಾಧು ಸಂತರು ಈ ಕುಂಭಮೇಳದಲ್ಲಿ ಭಾಗವಹಿಸಿರುವುದು ವಿಶೇಷ. 

ದೇಶದ ಹಲವು ರಾಜ್ಯಗಳಿಂದ ಬಂದ ಭಕ್ತರ ಗುಂಪು ಪ್ರಯಾಗ್‌ರಾಜ್‌ನ ವಿವಿಧ ಸ್ನಾನಘಟ್ಟಗಳಲ್ಲಿ ಕಂಡುಬಂದಿತು. ಉತ್ತರ ಪ್ರದೇಶದ ಸಿದ್ಧಾರ್ಥನಗರದಿಂದ ಬಂದ ಮಹಿಳೆಯರ ತಂಡವೊಂದು ಜನಪದ ಗೀತೆಗಳನ್ನು ಹಾಡುವುದರಲ್ಲಿ ನಿರತವಾಗಿತ್ತು.

ಜಪಾನ್‌ ಮತ್ತು ದಕ್ಷಿಣ ಕೊರಿಯಾದಿಂದ ಬಂದ ಯೂಟ್ಯೂಬರ್‌ಗಳು ಪ್ರಯಾಗ್‌ ರಾಜ್‌ನ ವಿವಿಧ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ತೊಡಗಿದ್ದರು. 

ಡಿಜಿಟಲ್ ಯುಗದಲ್ಲಿ, ಮಹಾಕುಂಭ ಮೇಳವು ಸಾಮಾಜಿಕ ಮಾಧ್ಯಮಗಳಲ್ಲೂ ಟ್ರೆಂಡಿಂಗ್ ಆಗಿದೆ. ಫೋಟೊ ಮತ್ತು ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಭಕ್ತರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅನೇಕ ಮಂದಿ ತಮ್ಮ ಕುಟುಂಬದ ಸದಸ್ಯರಿಗೆ ವಿಡಿಯೊ ಕರೆ ಮೂಲಕ ಗಂಗೆಯ ವರ್ಚುವಲ್ 'ದರ್ಶನ' ನೀಡಿದರು.

ಮಹಾಕುಂಭ ಮೇಳದ ಮೊದಲ ‘ಶಾಹೀ ಸ್ನಾನ’ ಮಂಗಳವಾರ (ಜ.14) ಮಕರ ಸಂಕ್ರಾಂತಿಯಂದು ನಡೆಯಲಿದ್ದು, ಸಂಗಮದ ನೀರಿನಲ್ಲಿ ಪವಿತ್ರ ಸ್ನಾನ ಮಾಡುವವರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಇದೇ 29ಕ್ಕೆ ಮೌನಿ ಅಮಾವಾಸ್ಯೆ ಮತ್ತು ಫೆ.3ರಂದು ವಸಂತ ಪಂಚಮಿ ದಿನಗಳಂದೂ ‘ಶಾಹೀ ಸ್ನಾನ’ ನೆರವೇರಲಿದೆ. ಕೊನೆಯ ಶಾಹೀ ಸ್ನಾನ ಫೆ.26ರಂದು ನಡೆಯಲಿದೆ.

ಮೊದಲ ‘ಶಾಹೀ ಸ್ನಾನ’ ಇಂದು

ಮಹಾಕುಂಭ ಮೇಳದ ಮೊದಲ ‘ಶಾಹೀ ಸ್ನಾನ’ ಮಂಗಳವಾರ (ಜ.14) ಮಕರ ಸಂಕ್ರಾಂತಿಯಂದು ನಡೆಯಲಿದ್ದು, ಸಂಗಮದ ನೀರಿನಲ್ಲಿ ಪವಿತ್ರ ಸ್ನಾನ ಮಾಡುವವರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಇದೇ 29ಕ್ಕೆ ಮೌನಿ ಅಮಾವಾಸ್ಯೆ ಮತ್ತು ಫೆ.3ರಂದು ವಸಂತ ಪಂಚಮಿ ದಿನಗಳಂದೂ ‘ಶಾಹೀ ಸ್ನಾನ’ ನೆರವೇರಲಿದೆ. ಕೊನೆಯ ಶಾಹೀ ಸ್ನಾನ ಫೆ.26ರಂದು ನಡೆಯಲಿದೆ.

‘ದೇವಾಲಯಗಳ ಮೇಲೆ ನಿರ್ಮಿಸಿರುವ ಮಸೀದಿ ಬಿಟ್ಟುಕೊಡಿ’

ಮಂದಿರ-ಮಸೀದಿ ವಿವಾದವನ್ನು ಮತ್ತೆ ಕೆದಕಿರುವ ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಾಂತ್ ರವೀಂದ್ರ ಪುರಿ, ‘ಮಸೀದಿಗಳಾಗಿ ಪರಿವರ್ತನೆ ಮಾಡಿರುವ ಎಲ್ಲ ಪ್ರಾಚೀನ ದೇವಾಲಯಗಳನ್ನು ತೆರವು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

‘ನಾನು ಧರ್ಮ ಪ್ರಚಾರಕ್ಕಾಗಿ ದೇಶದಾದ್ಯಂತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ಹೆಚ್ಚಿನ ಮಸೀದಿಗಳ ಗುಮ್ಮಟವು ದೇವಸ್ಥಾನದ ಗುಮ್ಮಟವನ್ನೇ ಹೋಲುತ್ತಿರುವುದನ್ನು ಗಮನಿಸಿದ್ದೇನೆ. ಮಸೀದಿಗಳ ಒಳಗೆ ‘ಸನಾತನ’ದ ಕುರುಹುಗಳನ್ನು ನಿಮಗೆ ಕಾಣಬಹುದು. ದೇಶದಾದ್ಯಂತವಿರುವ ಮಸೀದಿಗಳಲ್ಲಿ ಶೇ 80ರಷ್ಟನ್ನೂ ದೇವಾಲಯಗಳ ಮೇಲೆ ನಿರ್ಮಿಸಲಾಗಿದೆ’ ಎಂದರು.

‘ಮಸೀದಿಗಳಾಗಿ ಪರಿವರ್ತನೆ ಮಾಡಿರುವ ಪ್ರಾಚೀನ ದೇವಾಲಯಗಳನ್ನು ಹಿಂದೂಗಳಿಗೆ ಬಿಟ್ಟುಕೊಡುವಂತೆ ಮುಸ್ಲಿಮರಿಗೆ ಸಾವಿರ ಬಾರಿ ಮನವಿ ಮಾಡಿದ್ದೇವೆ. ಮಹಾಕುಂಭ ಮೇಳದಲ್ಲಿ ಮತ್ತೊಮ್ಮೆ ಅದೇ ಮನವಿ ಮಾಡುತ್ತೇನೆ. ಮಸೀದಿಗಳ ಮೇಲೆ ನಿರ್ಮಿಸಿರುವ ದೇವಾಲಯಗಳನ್ನು ಬಿಟ್ಟುಕೊಡಲು ನಾವು ಸಿದ್ಧರಿದ್ದೇವೆ’ ಎಂದು ತಿಳಿಸಿದರು.

ಮುಸ್ಲಿಮರು ಕುಂಭಮೇಳಕ್ಕೆ ಭೇಟಿ ನೀಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.