ADVERTISEMENT

ಕೊರೊನಾ ಕಾಲದಲ್ಲೂ ಹಳ್ಳಿಗರ ಸೇವೆಗೆ ನಿಂತ ಹಿರಿಯ ವೈದ್ಯ

87ರ ಹರೆಯದಲ್ಲೂ ಸೈಕಲ್‌ನಲ್ಲೇ ಸಂಚಾರ, ಮನೆ ಬಾಗಿಲಲ್ಲೇ ಉಚಿತ ಸೇವೆ

ಪಿಟಿಐ
Published 18 ಅಕ್ಟೋಬರ್ 2020, 6:04 IST
Last Updated 18 ಅಕ್ಟೋಬರ್ 2020, 6:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಗಪುರ: ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಹಿರಿಯ ನಾಗರಿಕರು, ಹಿರಿಯ ವೈದ್ಯರು ಸುರಕ್ಷತೆಯ ದೃಷ್ಟಿಯಿಂದ ಮನೆಯಲ್ಲೇ ಉಳಿದಿರುವ ಈ ಹೊತ್ತಿನಲ್ಲಿ, ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಮುಲ್‌ ಗ್ರಾಮದ 87 ವರ್ಷದ ವೈದ್ಯರೊಬ್ಬರು, ಕುಗ್ರಾಮಗಳಿಗೆ ತೆರಳಿ ಅಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ!

ರಾಮಚಂದ್ರ ದಾಂಡೇಕರ್, ಕೊರೊನಾ ಕಾಲದಲ್ಲಿ, ಇಳಿವಯಸ್ಸಿನಲ್ಲೂ ಕುಗ್ರಾಮಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿರುವ ಹಿರಿಯ ವೈದ್ಯ. ಅಚ್ಚರಿಯ ವಿಷಯ ಏನೆಂದರೆ, ಇವರು ತನ್ನ ಆಪ್ತಸಂಗಾತಿ ಬೈಸಿಕಲ್‌ ಏರಿಯೇ ಹಳ್ಳಿಗಳಿಗೆ ಚಿಕಿತ್ಸೆ ನೀಡಲು ತೆರಳುತ್ತಾರೆ. ಅಷ್ಟೇ ಅಲ್ಲ, 60 ವರ್ಷಗಳವರೆಗೆ ಪ್ರತಿ ನಿತ್ಯ 10 ಕಿ.ಮೀ ಬರಿಗಾಲಲ್ಲಿ ನಡೆಯುತ್ತಾ ಮುಲ್‌ನ ಆಸುಪಾಸಿನ ಹಳ್ಳಿಗಳು, ಸುತ್ತಮುತ್ತಲಿನ ತಾಲ್ಲೂಕುಳಿಗೆ ತೆರಳಿ ರೋಗಿಗಳ ಮನೆಬಾಗಿಲಲ್ಲೇ ಉಚಿತ ಚಿಕಿತ್ಸೆ ನೀಡುತ್ತಿದ್ದರಂತೆ.

1957–58ರಲ್ಲಿ ನಾಗಪುರದಲ್ಲಿ ವೈದ್ಯಕೀಯದಲ್ಲಿ ಡಿಪ್ಲೊಮಾ (ಹೋಮಿಯೊಪಥಿ) ಪಡೆದ ಮೇಲೆ, ದಾಂಡೇಕರ್ ಅವರು ಚಂದ್ರಾಪುರ ಹೋಮಿಯೊಪಥಿ ಕಾಲೇಜಿನಲ್ಲಿ ಕೆಲವು ವರ್ಷಗಳ ಕಾಲ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ನೀಡುವುದಕ್ಕೆ ಮುಂದಾದರು.

ADVERTISEMENT

‘ನಮ್ಮ ತಂದೆ ವಾರದಲ್ಲಿ ಆರು ದಿನಗಳ ಕಾಲ ನಿಗದಿತ ವೇಳಾಪಟ್ಟಿಯೊಂದಿಗೆ ಹಳ್ಳಿಗಳಿಗೆ ತೆರಳುತ್ತಾರೆ. ಹೋಗುವಾಗ ವೈದ್ಯಕೀಯ ಕಿಟ್‌ ಜತೆಗೆ ಔಷಧಿಗಳನ್ನು ಮಾತ್ರ ಕೊಂಡೊಯ್ಯುತ್ತಾರೆ. ಅವರು ಮೊಬೈಲ್‌ ಫೋನ್ ಅಥವಾ ಗಡಿಯಾರವನ್ನು ತೆಗೆದುಕೊಂಡು ಹೋಗುವುದಿಲ್ಲ‘ ಎನ್ನುತ್ತಾರೆ ರಾಮಚಂದ್ರ ಅವರ ಹಿರಿಯ ಪುತ್ರ ಜಯಂತ್ ದಾಂಡೇಕರ್,

‘ದೂರದ ತಾಲ್ಲೂಕಿನಲ್ಲಿರುವ ರೋಗಿಗಳನ್ನು ಉಪಚರಿಸಲು ಬಸ್‌ನಲ್ಲಿ ತೆರಳುತ್ತಾರೆ. ಅಲ್ಲಿ ಯಾರ ಮನೆಯಿಂದಲಾದರೂ ಸೈಕಲ್‌ಗಳನ್ನು ತೆಗೆದುಕೊಂಡು, ಅದರಲ್ಲಿ ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ನೀಡುತ್ತಾರೆ. ಹಳ್ಳಿಗಳಿಗೆ ಭೇಟಿ ನೀಡಿದ ವೇಳೆ ತುಂಬಾ ವಿಳಂಬವಾದರೆ, ಅಲ್ಲೇ ಯಾರದ್ದಾದರೂ ಮನೆಯಲ್ಲಿ ಉಳಿಯುತ್ತಾರೆ‘ ಎಂದು ಜಯಂತ್ ತಂದೆಯ ‘ಸೇವಾ ಚಟುವಟಿಕೆ‘ಯನ್ನು ವಿವರಿಸಿದರು.

ಪ್ರತಿಯೊಬ್ಬರು ಅವರನ್ನು ‘ಡಾಕ್ಟರ್‌ ಸಹಾಬ್ ಮುಲ್‌ ವಾಲೆ‘ ಎಂದು ಕರೆಯುತ್ತಾರಂತೆ. ಪ್ರತಿ ಹಳ್ಳಿಯಲ್ಲಿ ಕನಿಷ್ಠ 20 ಮನೆಗಳಿಗಾದರೂ ಭೇಟಿ ನೀಡುತ್ತಾರೆ. ಕೊರೊನಾ ಸೋಂಕಿನ ಅವಧಿಯಲ್ಲಿ, ಅವರು ರೋಗಿಗಳನ್ನು ಭೇಟಿ ಮಾಡುವ ಪ್ರಮಾಣ ಕಡಿಮೆಯಾಗಿದ್ದರೂ, ತಮ್ಮ ಉಚಿತ ಸೇವೆಯನ್ನು ಮುಂದುವರಿಸಿದ್ದಾರೆ.

‘ಜ್ವರ ಮತ್ತು ವೈರಲ್ ಸೋಂಕಿನಿಂದ ಬಳಲುತ್ತಿದ್ದವರಿಗೆ ಹತ್ತಿರದ ಆಸ್ಪತ್ರೆಗೆ ದಾಖಲಾಗುವಂತೆ ಮಾರ್ಗದರ್ಶನ ಮತ್ತು ಸಲಹೆ ನೀಡುತ್ತಾರೆ‘ ಎಂದು ತಮ್ಮ ತಂದೆಯ ನಿಸ್ವಾರ್ಥ ಸೇವೆಯ ಬಗ್ಗೆ ಹೆಮ್ಮ ಪಡುತ್ತಾರೆ ಜಯಂತ್.

ತನ್ನ ವೈದ್ಯಕೀಯ ಸೇವೆ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಾಮಚಂದ್ರ ದಾಂಡೇಕರ್, ‘ಕೊರೊನಾಗೆ ಮುನ್ನ ಮತ್ತು ನಂತರ ನನ್ನ ನಿತ್ಯದ ಕೆಲಸದಲ್ಲಿ ಏನೂ ಬದಲಾವಣೆಯಾಗಿಲ್ಲ. ನಾನು ನಿಸ್ವಾರ್ಥವಾಗಿ ಹಳ್ಳಿಯ ಬಡವರಿಗೆ ವೈದ್ಯಕೀಯ ಸೇವೆ ನೀಡುವುದನ್ನು ಮುಂದುವರಿಸುತ್ತೇನೆ‘ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.