ADVERTISEMENT

ಮಹಾರಾಷ್ಟ್ರ: ಆತ್ಮಹತ್ಯೆಗೆ ಪ್ರಚೋದನೆ, ಮೂವರು ಪೊಲೀಸರು ಸೇರಿ 6 ಜನರ ಮೇಲೆ ಕೇಸ್‌

ಪಿಟಿಐ
Published 12 ಮಾರ್ಚ್ 2021, 6:27 IST
Last Updated 12 ಮಾರ್ಚ್ 2021, 6:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಠಾಣೆ: ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರು, ಒಬ್ಬ ಮಹಿಳೆ ಮತ್ತು ಅವರ ಮಗಳು ಸೇರಿದಂತೆ ಆರು ಜನರ ವಿರುದ್ಧ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದರು.

ಆರೋಪಿಗಳು ಬೆದರಿಸಿ ಹಣ ಸುಲಿಗೆಗೆ ಯತ್ನಿಸಿದ್ದರಿಂದ ಹೆದರಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಸಚಿನ್‌ ಸಾಬಲ್‌ ಎಂಬುವವರು ಮುಂಬೈನ ಮಕ್ಕಳ ಕಲ್ಯಾಣ ಯೋಜನಾ ಅಧಿಕಾರಿ ಆಗಿದ್ದರು. ಅವರು ಠಾಣೆ ಜಿಲ್ಲೆಯ ಅಂಬರನಾಥ್‌ದಲ್ಲಿ ವಾಸಿಸುತ್ತಿದ್ದರು ಎಂದು ಶಿವಾಜಿನಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಹೇಳಿದರು.

ನಾಗ್ಪುರದಲ್ಲಿಸಮಗ್ರ ಮಕ್ಕಳ ಅಭಿವೃದ್ಧಿ ಸೇವಾ (ಐಸಿಡಿಎಸ್‌) ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀತಾ ಖೇಡ್ಕರ್‌ ಎಂಬುವವರು ಸಚಿನ್‌ ಸಾಬಲ್‌ ಅವರನ್ನು ಪರಿಚಯ ಮಾಡಿಕೊಂಡು, ವಿವಾಹ ಆಗುವಂತೆ ಒತ್ತಾಯಿಸಿದ್ದರು. ನೀತಾ ಖೇಡ್ಕರ್‌ ಅವರ ಪತಿ ಈಗಾಗಲೇ ಮೃತರಾಗಿದ್ದು, ಅವರಿಗೆ ಒಬ್ಬ ಮಗಳೂ ಇದ್ದಾರೆ.

ADVERTISEMENT

ನೀತಾ ಅವರ ಮನವಿಯನ್ನು ಸಚಿನ್‌ ತಿರಸ್ಕರಿಸಿದಾಗ, ನೀತಾ ಅವರು ತನ್ನ ಪತಿಯ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. 2020ರ ಡಿಸೆಂಬರ್‌ನಿಂದ 2021ರ ಫೆಬ್ರುವರಿವರೆಗೂ ಈ ರೀತಿ ಬೆದರಿಕೆಗಳನ್ನು ಹಾಕಿ ನೀತಾ ಅವರು ಕಿರುಕುಳ ನೀಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

ಕೆಲ ದಿನಗಳ ಬಳಿಕ ನಾಗಪುರದ ಯಶೋಧಾನಗರದ ಪೊಲೀಸ್‌ ಠಾಣೆಯ ಸಿಬ್ಬಂದಿ ಸಚಿನ್‌ ಅವರಿಗೆ ಕರೆ ಮಾಡಿ ನೀತಾ ಖೇಡ್ಕರ್‌ ಅವರ ಪತಿಯ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮನ್ನು ಸೇರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರಕರಣ ದಾಖಲಿಸಬಾರದು ಎಂದಾದರೆ ₹ 9.50 ಲಕ್ಷ ನೀಡುವಂತೆ ಅವರು ಒತ್ತಾಯಿಸಿದ್ದರು ಎಂದು ಸಚಿನ್‌ ಅವರ ಸಹೋದರ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.

‘ಬೆದರಿಕೆ ಮತ್ತು ಕಿರುಕುಳಗಳಿಂದಾಗಿ ಸಚಿನ್‌ ಫೆಬ್ರುವರಿ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಎದುರಿಸಿದ ಸಂಕಷ್ಟಗಳ ಕುರಿತು ಅವರು ಸಹೋದರನಿಗೆ ಕಳುಹಿಸಿರುವ ಇ–ಮೇಲ್‌ನಲ್ಲಿ ವಿವರಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಮಹಿಳೆ, ಆಕೆಯ ಮಗಳು, ಸಹೋದರ ಹಾಗೂ ಮೂವರು ಪೊಲೀಸರ (ಇಬ್ಬರು ಇನ್‌ಸ್ಪೆಕ್ಟರ್‌ ಮತ್ತು ಒಬ್ಬ ಸಬ್‌ ಇನ್‌ಸ್ಪೆಕ್ಟರ್‌) ವಿರುದ್ಧ ಐಪಿಸಿ ಸೆಕ್ಷನ್‌ 306 (ಆತ್ಮಹತ್ಯೆಗೆ ಪ್ರಚೋದನೆ), 384 (ಸುಲಿಗೆ) ಅಡಿ ಪ್ರಕರಣ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.