ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ‘ಮಹಾಯುತಿ’ ಮೈತ್ರಿಕೂಟದ ಪಕ್ಷಗಳ ನಡುವಿನ ಸೀಟು ಹಂಚಿಕೆ ಚರ್ಚೆ ಅಂತಿಮ ಹಂತವನ್ನು ತಲುಪಿದೆ. ಶೀಘ್ರ ತೀರ್ಮಾನ ಹೊರಬೀಳಲಿದೆ ಎಂದು ಮೈತ್ರಿಕೂಟದ ಮುಖಂಡರು ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯ ಸದಸ್ಯ ಬಲ 288. ಸೀಟು ಹಂಚಿಕೆ ಕುರಿತು ಮೈತ್ರಿಕೂಟದ ಪಕ್ಷಗಳಾದ ಬಿಜೆಪಿ, ಶಿವಸೇನೆ (ಶಿಂದೆ ಬಣ), ಎನ್‌ಸಿಪಿ (ಅಜಿತ್ ಬಣ) ಮಧ್ಯೆ ಮಾತುಕತೆ ನಡೆದಿವೆ.
ಗಣೇಶೋತ್ಸವ ಆಚರಣೆಗಳು ಮುಗಿದ ಬಳಿಕ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್ ಮತ್ತು ಅಜಿತ್ ಪವಾರ್ ಚರ್ಚಿಸಲಿದ್ದು, ಸರ್ವಸಮ್ಮತ ಸೂತ್ರವನ್ನು ಅಂತಿಮಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
‘ಈಚೆಗೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ರಾಜ್ಯದಲ್ಲಿ ಹಿನ್ನಡೆ ಆಗಿತ್ತು. ಮತ್ತೆ ಅಂತಹ ಸಂದರ್ಭ ಎದುರಿಸಲಾಗದು. ಮಹಾರಾಷ್ಟ್ರವು ಬಿಜೆಪಿಗೆ ಮುಖ್ಯವಾಗಿದ್ದು, ಇಲ್ಲಿನ ಗೆಲುವು ಎನ್‌ಡಿಎ ಉತ್ಸಾಹವನ್ನು ಇಮ್ಮಡಿಗೊಳಿಸಲಿದೆ’ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖಂಡ ಅಮಿತ್ ಶಾ ಅವರು ಕಳೆದ ವಾರ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಚರ್ಚೆ ವೇಗ ಪಡೆದಿತ್ತು. ರಾಜ್ಯ ಬಿಜೆಪಿಯು ಕನಿಷ್ಠ 170 ಕ್ಷೇತ್ರಗಳಿಗೆ ಪಟ್ಟು ಹಿಡಿದಿದೆ. ಕನಿಷ್ಠ 150 ಆದರೂ ಸಿಗಬಹುದು ಎನ್ನುವುದು ಪಕ್ಷದ ನಿರೀಕ್ಷೆ.
ಇನ್ನೊಂದೆಡೆ, ಶಿವಸೇನೆಯು 100ರಿಂದ 110 ಕ್ಷೇತ್ರ ಹಾಗೂ ಎನ್‌ಸಿಪಿ (ಅಜಿತ್ ಬಣ) 70 ರಿಂದ 80 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿವೆ. ‘ಮೆರಿಟ್ ಮತ್ತು ಗೆಲ್ಲುವ ಸಾಧ್ಯತೆ ಆಧರಿಸಿ ಹಂಚಿಕೆ ಸೂತ್ರ ಅಂತಿಮವಾಗಲಿದೆ. ಸದ್ಯ, ಶಿವಸೇನೆ ಮತ್ತು ಎನ್‌ಸಿಪಿ ಕೇಳಿರುವಷ್ಟು ಸೀಟುಗಳನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ’ ಎಂದು ಮುಖಂಡರೊಬ್ಬರು ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ಸರಳ ಬಹುಮತಕ್ಕಾಗಿ 145 ಸ್ಥಾನಗಳು ಅಗತ್ಯ. 2019ರಲ್ಲಿ ಆದಂತೆ ಕೊನೆ ಗಳಿಗೆಯಲ್ಲಿ ಎದುರಾಗುವ ಸಮಸ್ಯೆ ತಪ್ಪಿಸಲು ಆದಷ್ಟೂ 145ಕ್ಕೆ ಹತ್ತಿರವಾಗುವಷ್ಟು ಕ್ಷೇತ್ರಗಳಲ್ಲಿ ಗೆಲ್ಲುವುದು ಬಿಜೆಪಿಯ ಗುರಿ ಎಂದು ಮುಖಂಡರೊಬ್ಬರು ಪ್ರತಿಪಾದಿಸಿದರು.
ಸೀಟು ಹಂಚಿಕೆ ಪ್ರಕ್ರಿಯೆ 8–10 ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಶಿಂದೆ ಈಚೆಗೆ ಮಾಧ್ಯಮ ಪ್ರತಿನಿಧಿಗಳ ಜೊತೆಗಿನ ಅನೌಪಚಾರಿಕ ಚರ್ಚೆಯ ಸಂದರ್ಭ ಹೇಳಿದ್ದರು.
ಬಿಜೆಪಿ ನೇತೃತ್ವದ ‘ಮಹಾಯುತಿ’ಯಲ್ಲಿ ಮೂರು ಪ್ರಮುಖ ಪಕ್ಷಗಳಲ್ಲದೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಬಹುಜನ ವಿಕಾಸ ಆಘಾಡಿ, ಪ್ರಹಾರ್ ಜನಶಕ್ತಿ ಪಾರ್ಟಿ, ಪೀಪಲ್ಸ್ ರಿಪಬ್ಲಿಕನ್ ಪಾರ್ಟಿ, ರಾಷ್ಟ್ರೀಯ ಸಮಾಜ್ ಪಾರ್ಟಿ ಕೂಡಾ ಇವೆ.
‘ಈ ಎಲ್ಲ ಪಕ್ಷಗಳಿಗೂ ನಾವು ಅವಕಾಶ ಕೊಡಬೇಕಾಗುತ್ತದೆ. ಬಹುತೇಕ ಈ ಪಕ್ಷಗಳು ಬಿಜೆಪಿ ಕೋಟಾದಲ್ಲಿಯೇ ಪಾಲು ಪಡೆಯಲಿವೆ’ ಎನ್ನುತ್ತವೆ ಮಹಾಯುತಿ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.