ADVERTISEMENT

ಮಹದಾಯಿ: ಡಿಪಿಆರ್‌ಗೆ ಅನುಮೋದನೆ ವಿರೋಧಿಸಿ ಕೇಂದ್ರಕ್ಕೆ ನಿಯೋಗ- ಗೋವಾ

ಪಿಟಿಐ
Published 2 ಜನವರಿ 2023, 11:06 IST
Last Updated 2 ಜನವರಿ 2023, 11:06 IST
ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್   

ಪಣಜಿ: ಮಹದಾಯಿ ನದಿಗೆ ಅಡ್ಡಲಾಗಿ ಎರಡು ಜಲಾಶಯ ನಿರ್ಮಿಸುವ ಕರ್ನಾಟಕದ ಸಮಗ್ರ ಯೋಜನಾ ವರದಿಗೆ (ಡಿಪಿಅರ್‌) ಅನುಮೋದನೆ ನೀಡಿರುವುದನ್ನು ವಿರೋಧಿಸಿ ಕೇಂದ್ರಕ್ಕೆ ನಿಯೋಗ ಕರೆದೊಯ್ಯಲು ಗೋವಾ ಸರ್ಕಾರ ತೀರ್ಮಾನಿಸಿದೆ.

‘ತಮ್ಮ ನೇತೃತ್ವದ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ’ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಸೋಮವಾರ ತಿಳಿಸಿದರು.

ನದಿ ನೀರು ಹಂಚಿಕೆ ಕುರಿತು ಕರ್ನಾಟಕ– ಗೋವಾ ನಡುವೆ ಹಲವು ವರ್ಷಗಳಿಂದ ವಿವಾದವಿದೆ. ಎರಡು ಜಲಾಶಯ ನಿರ್ಮಿಸುವ ಡಿಪಿಅರ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಚೆಗೆ ಪ್ರಕಟಿಸಿದ್ದರು. ಹೀಗಾಗಿ, ಈ ವಿಷಯ ಚರ್ಚಿಸಲು ಗೋವಾದ ಮುಖ್ಯಮಂತ್ರಿ ಸೋಮವಾರ ವಿಶೇಷ ಸಂಪುಟ ಸಭೆ ಕರೆದಿದ್ದರು.

ADVERTISEMENT

ಕರ್ನಾಟಕದ ಉದ್ದೇಶಿತ ಕಳಸಾ ಬಂಡೂರಿ ಯೋಜನೆಯ ಪರಿಣಾಮ ಗೋವಾದ ಉತ್ತರ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಪೂರೈಕೆ ಮೇಲೂ ಆಗಲಿದೆ. ಇದನ್ನು ಮನವರಿಕೆ ಮಾಡಿಕೊಡಲು ನಿಯೋಗವನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದರು.

ನೀರು ಹಂಚಿಕೆ ವಿಷಯದಲ್ಲಿ ವಿರೋಧ ಪಕ್ಷಗಳು ವಿರೋಧಿಸಬೇಕು ಎಂಬ ಕಾರಣಕ್ಕೆ ಆಕ್ಷೇಪಿಸಬಾರದು. ಮಹದಾಯಿ ಬದುಕಿನ ಪ್ರಶ್ನೆಯಾಗಿದ್ದು, ಎಲ್ಲರೂ ಒಗ್ಗೂಡಬೇಕು. ಮಹದಾಯಿ ನದಿ ತಾಯಿಗೆ ಸಮಾನವಾದುದು ಎಂದು ಸಾವಂತ್‌ ಹೇಳಿದರು.

ಮಹದಾಯಿ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯದ ಅನುಮೋದನೆಯೂ ಬೇಕಾಗುತ್ತದೆ. ಆದರೆ, ಮಹದಾಯಿ ನದಿ ವನ್ಯಜೀವಿ ಸಂರಕ್ಷಣೆ ಪ್ರದೇಶ ಹಾದುಹೋಗುವ ಹಿನ್ನೆಲೆಯಲ್ಲಿ ಈ ಅನುಮೋದನೆ ಸಿಗುವುದು ಅಸಂಭವ ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.