ADVERTISEMENT

ಮಹದಾಯಿ ವಿವಾದ: ಪರಿಹಾರ ಕಂಡುಕೊಳ್ಳುವಲ್ಲಿ ಬಿಜೆಪಿ ವಿಫಲ; ಪ್ರಕಾಶ್‌ ರಾಠೋಡ್

ಎಐಸಿಸಿಯ ಗೋವಾ ಉಸ್ತುವಾರಿ ಪ್ರಕಾಶ್ ರಾಠೋಡ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 10:56 IST
Last Updated 25 ಆಗಸ್ಟ್ 2021, 10:56 IST
ಪ್ರಕಾಶ್‌ ರಾಠೋಡ್
ಪ್ರಕಾಶ್‌ ರಾಠೋಡ್   

ಪಣಜಿ: ‘ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ರಾಜಕೀಯವಾಗಿಯೇ ಬಗೆಹರಿಸಬೇಕು. ಗೋವಾ, ಕರ್ನಾಟಕ ಹಾಗೂ ಕೇಂದ್ರದಲ್ಲಿ ಪಕ್ಷದ ನೇತೃತ್ವ ಸರ್ಕಾರಗಳೇ ಇದ್ದರೂ, ಈ ವಿವಾದಕ್ಕೆ ಬಿಜೆಪಿ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ’ ಎಂದು ಎಐಸಿಸಿಯ ಗೋವಾ ಉಸ್ತುವಾರಿ, ಕರ್ನಾಟಕದ ಕಾಂಗ್ರೆಸ್‌ ಮುಖಂಡ ಪ್ರಕಾಶ್‌ ರಾಠೋಡ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಿದರೆ, ಎರಡು ದಶಕಗಳ ಈ ವಿವಾದಕ್ಕೆ ಎರಡು ನಿಮಿಷಗಳಲ್ಲಿಯೇ ಪರಿಹಾರ ನೀಡಬಹುದಾಗಿದೆ. ಆ ರೀತಿ ಮಾಡಲು ಅವರಲ್ಲಿಯೂ ಇಚ್ಛಾಶಕ್ತಿ ಇಲ್ಲ’ ಎಂದು ಟೀಕಿಸಿದರು.

‘ಮಹದಾಯಿ ನದಿ ನೀರು ಹಂಚಿಕೆ ವಿಷಯವಾಗಿ ಕರ್ನಾಟಕ ಹಾಗೂ ಗೋವಾ ಕಚ್ಚಾಡುತ್ತಲೇ ಇರಬೇಕು ಎಂಬುದು ಬಿಜೆಪಿ ನಾಯಕರ ಬಯಕೆಯಾಗಿದೆ’ ಎಂದರು.

ADVERTISEMENT

‘ಮಹದಾಯಿ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ಸದ್ಯ ನ್ಯಾಯಮಂಡಳಿ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಆದರೆ, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ಸರ್ಕಾರಗಳು ಈ ವಿಷಯವಾಗಿ ರಾಜಕೀಯ ನಿರ್ಧಾರ ಕೈಗೊಳ್ಳಬೇಕು. ಮೂರು ಸರ್ಕಾರಗಳು ಒಟ್ಟಿಗೆ ಚರ್ಚಿಸಿ, ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಇಂಥ ವೇದಿಕೆ ರೂಪಿಸುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಹ ವಿಫಲವಾಗಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.