ADVERTISEMENT

ಬಿಹಾರ: ಮಹಾಮೈತ್ರಿಯೊಳಗೆ ಅತೃಪ್ತಿಗೇ ಮೇಲುಗೈ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 19:33 IST
Last Updated 28 ಮಾರ್ಚ್ 2019, 19:33 IST
ತೇಜ್‌ ಪ್ರತಾಪ್ ಯಾದವ್
ತೇಜ್‌ ಪ್ರತಾಪ್ ಯಾದವ್   

ಪಟ್ನಾ: ಬಿಹಾರದಲ್ಲಿ ಲೋಕಸಭಾ ಚುನಾವಣೆಗೆ ಮುನ್ನವೇ ಆರ್‌ಜೆಡಿ ನೇತೃತ್ವದ ಮಹಾಮೈತ್ರಿ ಕುಸಿಯುತ್ತಿದೆಯೇ?

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಪಕ್ಷದ ಮುಖಂಡರಲ್ಲಿನ ಆಂತರಿಕ ಬೇಗುದಿ, ಪಕ್ಷಾಂತರ ಪರ್ವಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೌದು ಅನಿಸುತ್ತದೆ.

ನಿವೃತ್ತಐಪಿಎಸ್ ಅಧಿಕಾರಿಯೂ ಆದ ಕಾಂಗ್ರೆಸ್‌ನ ಮಾಜಿ ಸಂಸದ ನಿಖಿಲ್‌ ಕುಮಾರ್ ಅವರಿಗೆ ಔರಂಗಾಬಾದ್‌ನಿಂದ ಟಿಕೆಟ್‌ ನಿರಾಕರಣೆ ಮಾಡಿರುವುದು, ದರ್ಭಾಂಗ ಕ್ಷೇತ್ರದ ಸಂಸದ ಕೀರ್ತಿ ಆಜಾದ್‌ ಅವರಿಗೆ ಟಿಕೆಟ್‌ ನೀಡದಿರುವುದು ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿಯಿಂದ ಹೊರಬಂದು ಇತ್ತೀಚೆಗೆ ಕಾಂಗ್ರೆಸ್‌ ಸೇರಿದ ಮೂರು ಅವಧಿಯ ಸಂಸದ ಕೀರ್ತಿ ಅವರಿಗೆ ಅವಕಾಶ ತಪ್ಪಿಸಿ, ಅಲ್ಲಿ ಆರ್‌ಜೆಡಿಯ ಮುಖಂಡ ಅಬ್ದುಲ್‌ ಬಾರಿ ಸಿದ್ದಿಕಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಆರ್‌ಜೆಡಿಯಿಂದ ಅಮಾನತುಗೊಂಡಿರುವ ಸಂಸದ ಪಪ್ಪು ಯಾದವ್‌ ಅವರ ಪತ್ನಿ ರಂಜಿತಾ ರಂಜನ್‌ ಅವರಿಗೆ ಟಿಕೆಟ್‌ ನಿರಾಕರಿಸಿರುವುದು ಕಾಂಗ್ರೆಸ್‌ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಕಾಂಗ್ರೆಸ್‌ ಅನ್ನುಆರ್‌ಜೆಡಿ ನಿರ್ಲಕ್ಷಿಸುತ್ತಿದೆ ಎಂಬ ಅಸಮಾಧಾನ ಕಾಂಗ್ರೆಸ್‌ ಮುಖಂಡರಲ್ಲಿ ಆವರಿಸಿದ್ದು, ಲೋಕಸಭಾ ಚುನಾವಣೆಯನ್ನು ಪಕ್ಷ ಸ್ವತಂತ್ರವಾಗಿ ಎದುರಿಸಬೇಕು ಎಂಬ ಧೋರಣೆಯನ್ನು ಹಲವು ನಾಯಕರು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಧ್ಯಪ್ರವೇಶದಿಂದ ನಾಯಕರ ಬಂಡಾಯ ಸದ್ಯಕ್ಕೆ ಶಮನವಾಗಿದೆ. ಆರ್‌ಜೆಡಿ ಕೂಡ ತನ್ನ ಪಟ್ಟು ಸಡಿಲಿಸಲು ಮುಂದಾಗಿದೆ. ರಂಜಿತಾ ರಂಜನ್‌ ಅವರನ್ನು ಬೆಂಬಲಿಸಲು ಒಲವು ತೋರಿದೆ. ಕೀರ್ತಿ ಆಜಾದ್‌ ಅವರು ದರ್ಭಾಂಗ ಬಿಟ್ಟು ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ತಿಳಿಸಿದೆ. ಆದರೆ ಇದಕ್ಕೆ ಕೀರ್ತಿ ಒಪ್ಪಿಲ್ಲ.

ಈ ಎಲ್ಲ ಬೆಳವಣಿಗೆಗಳಿಂದಾಗಿ ಮಹಾಘಟಬಂಧನದ ಅಭ್ಯರ್ಥಿಗಳ ಪಟ್ಟಿ ಇನ್ನೂ ಪ್ರಕಟವಾಗಿಲ್ಲ.

ಪಕ್ಷದ ಹುದ್ದೆಗೆ ಲಾಲು ಪುತ್ರನ ರಾಜೀನಾಮೆ

ಪಟ್ನಾ (ಪಿಟಿಐ):ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್ ಯಾದವ್ ಅವರು ಪಕ್ಷದ ವಿದ್ಯಾರ್ಥಿ ಘಟಕದ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ಪಕ್ಷದ ವಿದ್ಯಾರ್ಥಿ ಘಟಕದ ಮುಖ್ಯಸ್ಥನ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ನಾನುಉಪಯೋಗವಿಲ್ಲದ ವ್ಯಕ್ತಿ ಎಂದು ತಿಳಿದಿರುವವರಿಂದಲೇ ನಿಜವಾಗಿ ಉಪಯೋಗವಿಲ್ಲ. ಯಾರು ಎಲ್ಲಿಗೆ ಸಲ್ಲುತ್ತಾರೆ ಎಂದು ನನಗೆ ಚೆನ್ನಾಗಿ ಗೊತ್ತಿದೆ’ ಎಂದು ತೇಜ್ ಪ್ರತಾಪ್ ಟ್ವೀಟ್ ಮಾಡಿದ್ದಾರೆ. ತೇಜ್ ಪ್ರತಾಪ್ ಪತ್ನಿಯ ತಂದೆ ಚಂದ್ರಿಕಾ ರಾಯ್ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ತೇಜಸ್ವಿ,ಲಾಲು ಬಯಸಿದ್ದಾರೆ. ಪತ್ನಿಯಿಂದ ವಿಚ್ಛೇದನ ಬಯಸಿರುವ ತೇಜ್ ಪ್ರತಾಪ್, ಚಂದ್ರಿಕಾ ರಾಯ್‌ ಅವರು ಆರ್‌ಜೆಡಿ ಅಭ್ಯರ್ಥಿಯಾಗುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜೀನಾಮೆಗೆ ಇದೂ ಒಂದು ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.