ADVERTISEMENT

ಮೈತ್ರಿಗೆ ಎಸ್‌ಪಿ–ಬಿಎಸ್‌ಪಿ ತಾತ್ವಿಕ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 18:21 IST
Last Updated 5 ಜನವರಿ 2019, 18:21 IST

ಲಖನೌ: 2019ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತಾತ್ವಿಕವಾಗಿ ಒಪ್ಪಿವೆ. ಈ ತಿಂಗಳ ಕೊನೆಯಲ್ಲಿ ಮೈತ್ರಿಯ ಅಧಿಕೃತ ಘೋಷಣೆ ಆಗಲಿದೆ ಎಂದು ಎಸ್‌ಪಿ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧರಿ ಹೇಳಿದ್ದಾರೆ. ಆದರೆ, ಇದು ಅವಕಾಶವಾದಿ ಮತ್ತು ಜನವಿರೋಧಿ ಮೈತ್ರಿ ಎಂದು ಬಿಜೆಪಿ ಹೇಳಿದೆ.

ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ನಡುವೆ ಹಲವು ಸುತ್ತಿನ ಮಾತುಕತೆ ಬಳಿಕ ಮೈತ್ರಿಗೆ ಒಪ್ಪಿಗೆ ನೀಡಲಾಗಿದೆ. ಇತರ ಪಕ್ಷಗಳನ್ನು ಮೈತ್ರಿಗೆ ಸೇರಿಸಿಕೊಳ್ಳುವ ಮಾತುಕತೆ ನಡೆಯು ತ್ತಿದೆ ಎಂದು ಚೌಧರಿ ಹೇಳಿದ್ದಾರೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಪ್ರಬಲವಾಗಿರುವ ರಾಷ್ಟ್ರೀಯ ಲೋಕದಳದ ಜತೆಗೂ ಮಾತುಕತೆ ನಡೆಯುತ್ತಿದೆ. ಕಾಂಗ್ರೆಸ್‌ ಪಕ್ಷವನ್ನು ಮೈತ್ರಿಯಲ್ಲಿ ಸೇರಿಸಿಕೊಳ್ಳಬೇಕೇ ಎಂಬುದನ್ನು ಅಖಿಲೇಶ್‌ ಮತ್ತು ಮಾಯಾವತಿ ನಿರ್ಧರಿಸಲಿದ್ದಾರೆ. ಆದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿನಿಧಿಸುವ ಅಮೇಠಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯಬರೇಲಿಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಕಣಕ್ಕಿಳಿಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ADVERTISEMENT

ದೇಶದ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದನ್ನು ನಿರ್ಧರಿಸುವಲ್ಲಿ80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ನಿರ್ಣಾಯಕ. ಕಳೆದ ಚುನಾವಣೆಯಲ್ಲಿ 71 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಎನ್‌ಡಿಎ ಭಾಗವಾಗಿದ್ದ ಅಪ್ನಾ ದಳ ಎರಡು ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು.

ಕಳೆದ ವರ್ಷ ಇಲ್ಲಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎನ್‌ಡಿಎಯೇತರ ಪಕ್ಷಗಳ ಮೈತ್ರಿಯು ಬಿಜೆಪಿಯನ್ನು ಸೋಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.