ತೀವ್ರ ಚಳಿಯ ನಡುವೆಯೇ 1.5 ಕೋಟಿ ಮಂದಿಯಿಂದ ಪವಿತ್ರ ಸ್ನಾನ
ಲಖನೌ: ದಟ್ಟವಾಗಿ ಆವರಿಸಿದ ಮಂಜು, ತೀವ್ರ ಚಳಿಯ ನಡುವೆಯೇ ಅಂದಾಜು 1.5 ಕೋಟಿ ಭಕ್ತರು ಸೋಮವಾರ ಪವಿತ್ರ ಸ್ನಾನ ಮಾಡುವುದರೊಂದಿಗೆ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳಕ್ಕೆ ವಿದ್ಯುಕ್ತ ಚಾಲನೆ ಲಭಿಸಿತು.
ಸನಾತನ ಧರ್ಮದಲ್ಲಿ ನಂಬಿಕೆಯಿರಿಸಿದ 1.5 ಕೋಟಿ ಮಂದಿ ‘ಪುಷ್ಯ ಪೂರ್ಣಿಮಾ’ ದಿನದಂದು ಪ್ರಯಾಗ್‌ರಾಜ್‌ನ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಕೂಡುವ ಸ್ಥಳ) ಪುಣ್ಯ ಸ್ನಾನ ಮಾಡಿದರು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಚಳಿಯ ವಾತಾವರಣವನ್ನು ಲೆಕ್ಕಿಸದೆ ಭಕ್ತರು ಮುಂಜಾನೆಯಿಂದಲೇ ಸಂಗಮಕ್ಕೆ ಬರಲಾರಂಭಿಸಿದರಲ್ಲದೆ, ಕೆಲವೇ ಗಂಟೆಗಳಲ್ಲಿ ಇಡೀ ಪ್ರದೇಶ ಸಾಧು–ಸಂತರಿಂದ ತುಂಬಿತು.
ಬೆಳಿಗ್ಗೆ 11ರ ವೇಳೆಗೆ 80 ಲಕ್ಷಕ್ಕೂ ಅಧಿಕ ಮಂದಿ ಪವಿತ್ರ ಸ್ನಾನ ಮಾಡಿದರು ಎಂದು ಉತ್ತರ ಪ್ರದೇಶ ಸರ್ಕಾರದ ಪ್ರಕಟಣೆ ತಿಳಿಸಿದೆ. ಗಂಗಾನದಿ ದಡದಲ್ಲಿ ಪೂಜೆ ಸಲ್ಲಿಸಿದ ಭಕ್ತರು ನಂತರ ವಿವಿಧ ಕಡೆಗಳಲ್ಲಿ ಆಯೋಜಿಸಿರುವ ಧಾರ್ಮಿಕ ಪ್ರವಚನ ಮತ್ತು ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಮಹಾಕುಂಭ ಮೇಳಕ್ಕೆ ಔಪಚಾರಿಕವಾಗಿ ಚಾಲನೆ ದೊರೆತಾಗ, ಭಕ್ತರು ‘ಜೈ ಗಂಗಾ’, ‘ಜೈ ಶ್ರೀರಾಮ್’, ‘ಹರ ಹರ ಮಹಾದೇವ’ ಎನ್ನುತ್ತಾ ತಂಡೋಪತಂಡವಾಗಿ ಸ್ನಾನ ಘಟ್ಟಗಳತ್ತ ಹೆಜ್ಜೆಯಿಟ್ಟರು. ಈ ವೇಳೆ ಇಡೀ ಸಂಗಮ ಪ್ರದೇಶದಲ್ಲಿ ಉತ್ಸಾಹದ ಅಲೆ ಎದ್ದಿತು. ಶಂಖ ಮತ್ತು ಭಜನೆಯ ಧ್ವನಿ ದಿನವಿಡೀ ಮೊಳಗಿತು.
ಸಂಗಮ ಪ್ರದೇಶದ ಹನುಮಾನ್ ದೇಗುಲದ ಬಳಿ ಸ್ಥಾಪಿಸಿರುವ ‘ಸೆಲ್ಫಿ ಪಾಯಿಂಟ್’ ಅಪಾರ ಸಂಖ್ಯೆಯ ಭಕ್ತರನ್ನು ತನ್ನತ್ತ ಸೆಳೆಯಿತು. ಅನೇಕ ಭಕ್ತರು ಸೆಲ್ಫಿ ತೆಗೆದುಕೊಳ್ಳಲು ತಮ್ಮ ಸರದಿಗಾಗಿ ತುಂಬಾ ಹೊತ್ತು ಕಾಯುತ್ತಾ ನಿಂತದ್ದು ಕಂಡುಬಂದಿತು.
ಮಹಾಕುಂಭ ಮೇಳಕ್ಕೆ ಬಂದ ಅಸ್ಸಾಂ ಮತ್ತು ಛತ್ತೀಸಗಢದ ತಲಾ ಒಬ್ಬರು ಭಾನುವಾರ ತೀವ್ರ ಚಳಿಯಿಂದಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಎರಡು ದಿನಗಳಲ್ಲಿ ಅಸ್ವಸ್ಥತೆ ಮತ್ತು ಎದೆ ನೋವಿನಿಂದ ಒಂಬತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಗಾ ನದಿಯ ದಂಡೆಯಲ್ಲಿರುವ ಬಿಡಾರಗಳನ್ನೊಳಗೊಂಡ ತಾತ್ಕಾಲಿಕ ನಗರವು ನಾಗಸಾಧುಗಳು, ಸಂತರು, ಮಠಾಧೀಶರು, ಬೈರಾಗಿಗಳು ಮತ್ತು ಭಕ್ತರಿಂದ ಬಹುತೇಕ ಭರ್ತಿಯಾಗಿದೆ.
* ಪವಿತ್ರ ಸ್ನಾನ ಮಾಡಿ ‘ಕಲ್ಪವಾಸ’ (ಒಂದು ತಿಂಗಳು ಕುಂಭದಲ್ಲಿ ಭಾಗವಹಿಸಿ, ಅತ್ಯಂತ ಶಿಸ್ತಿನ ಧಾರ್ಮಿಕ ಆಚರಣೆ ಅನುಸರಿಸುವವರು) ಆರಂಭಿಸಿದ ಭಕ್ತರು.
* ಮೊದಲ ದಿನ ಜನದಟ್ಟಣೆಯಿಂದಾಗಿ ‘ಕಾಣೆ’ಯಾದ 250 ಮಂದಿಯನ್ನು ಕುಟುಂಬ ಸದಸ್ಯರೊಂದಿಗೆ ಮತ್ತೆ ಸೇರಿಸಲಾಯಿತು.
* ಪ್ರಧಾನಿ ಮೋದಿ ಅವರು ಮಹಾಕುಂಭ ಮೇಳವನ್ನು ‘ಏಕತೆಯ ಕುಂಭ ಮೇಳ’ ಎಂದು ಶ್ಲಾಘಿಸಿದರು. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ‘ಏಕತಾ ಕಾ ಮಹಾಕುಂಭ’ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಮಹಾಕುಂಭ ಟ್ರೆಂಡಿಂಗ್‌ನಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.