ADVERTISEMENT

ವಂಚನೆ ಪ್ರಕರಣ: ’ಮಹಾ‘ ಕೃಷಿ ಸಚಿವರಿಗೆ 2 ವರ್ಷ ಸಜೆ, ₹50 ಸಾವಿರ ದಂಡ

ಪಿಟಿಐ
Published 20 ಫೆಬ್ರುವರಿ 2025, 15:35 IST
Last Updated 20 ಫೆಬ್ರುವರಿ 2025, 15:35 IST
<div class="paragraphs"><p>ಮಾಣಿಕ್‌ರಾವ್ ಕೋಕಟೆ</p></div>

ಮಾಣಿಕ್‌ರಾವ್ ಕೋಕಟೆ

   

ಚಿತ್ರ ಕೃಪೆ: X/@kokate_manikrao 

ಮುಂಬೈ: ಮಹಾರಾಷ್ಟ್ರದ ಕೃಷಿ ಸಚಿವ, ಎನ್‌ಸಿಪಿ ನಾಯಕ ಮಾಣಿಕ್‌ರಾವ್ ಕೋಕಟೆ ಅವರಿಗೆ ವಂಚನೆ ಪ್ರಕರಣದಲ್ಲಿ ನಾಸಿಕ್‌ನ ಜಿಲ್ಲಾ ಸೆಷನ್ಸ್ ಕೋರ್ಟ್, ಎರಡು ವರ್ಷ ಸಜೆ ವಿಧಿಸಿದೆ. ಅವರಿಗೆ ಈಗ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ADVERTISEMENT

ಸಚಿವರೇ ಶಿಕ್ಷೆಗೆ ಒಳಗಾಗಿರುವುದು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಸರ್ಕಾರಕ್ಕೂ ಇರಿಸುಮುರಿಸು ಮೂಡಿಸಿದೆ.

ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಎರಡು ಫ್ಲ್ಯಾಟ್‌ಗಳನ್ನು ಸ್ವಾಧೀನ ಪಡೆಯಲು ಮಾಣಿಕ್‌ರಾವ್‌ ಕೋಕಟೆ ಅವರು ದಾಖಲೆಗಳನ್ನು ತಿರುಚಿ ವಂಚನೆ ಎಸಗಿದ್ದಾರೆ ಎಂಬ 30 ವರ್ಷ ಹಳೆಯ ಪ್ರಕರಣದಲ್ಲಿ ಕೋರ್ಟ್‌ ಶಿಕ್ಷೆ ವಿಧಿಸಿದೆ.

ಕೋಕಟೆ ವಿರುದ್ಧ ಮಾಜಿ ಸಚಿವ, ದಿವಂಗತ ಟಿ.ಎಸ್‌. ದಿಘೋಲೆ 1997ರಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನಾಸಿಕ್‌ನ ಸೆಷನ್ಸ್‌ ಕೋರ್ಟ್, ಮಾಣಿಕ್‌ರಾವ್‌ ಮತ್ತು ಅವರ ಸಹೋದರ ವಿಜಯ್ ಕೋಕಟೆ ಅವರಿಗೆ ಶಿಕ್ಷೆ ವಿಧಿಸಿ ಆದೇಶಿಸಿತು. ಅಲ್ಲದೆ, ಸಹೋದರರಿಬ್ಬರಿಗೂ ಕೋರ್ಟ್ ತಲಾ ₹ 50 ಸಾವಿರ ದಂಡವನ್ನು ವಿಧಿಸಿದೆ.

67 ವರ್ಷದ ಕೋಕಟೆ ಅವರು ನಾಸಿಕ್‌ ಜಿಲ್ಲೆಯ ಸಿನ್ನರ್ ಕ್ಷೇತ್ರದಿಂದ ಐದು ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದಾರೆ. ಮೈತ್ರಿ ಕೂಟದ ಭಾಗವಾಗಿರುವ ಎನ್‌ಸಿಪಿ ಬಣದ ನಾಯಕ, ಉಪ ಮುಖ್ಯಮಂತ್ರಿ  ಅಜಿತ್ ಪವಾರ್ ಆಪ್ತ ವಲಯದಲ್ಲಿ ಇದ್ದಾರೆ.

ಫ್ಲ್ಯಾಟ್‌ ಸ್ವಾಧೀನ ಪಡೆಯುವ ಸಂದರ್ಭದಲ್ಲಿ, ನಮಗೆ ಬೇರಾವುದೇ ಸ್ವಂತ ಮನೆಯಿಲ್ಲ ಹಾಗೂ ಆರ್ಥಿಕ ಸ್ಥಿತಿ ಕೂಡಾ ಉತ್ತಮವಾಗಿಲ್ಲ ಎಂದು ತಿರುಚಲಾದ ದಾಖಲೆ ನೀಡಿದ್ದರು ಎಂದು ಎಪಿಪಿ ಪೂನಂ ಗೋಟ್ಕೆ ಅವರು ತಿಳಿಸಿದರು.

‘ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇನೆ. ಸೆಷನ್ಸ್‌ ಕೋರ್ಟ್‌ ನನಗೆ ಸದ್ಯ ಜಾಮೀನು ನೀಡಿದೆ’ ಎಂದು ಸಚಿವ ಮಾಣಿಕ್‌ರಾವ್‌ ಕೋಕಟೆ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.