ADVERTISEMENT

ಮಹಾರಾಷ್ಟ್ರ: ಸೇನಾಕ್ಕಿಲ್ಲ ಸಮಾನ ಸ್ಥಾನ

ವಿಧಾನಸಭೆ ಚುನಾವಣೆ: 50;50ರ ಅನುಪಾತದ ಕ್ಷೇತ್ರ ಹಂಚಿಕೆಗೆ ಬಿಜೆಪಿ ನಿರಾಕರಣೆ

ಪಿಟಿಐ
Published 17 ಅಕ್ಟೋಬರ್ 2019, 9:59 IST
Last Updated 17 ಅಕ್ಟೋಬರ್ 2019, 9:59 IST
   

ನವದೆಹಲಿ: ಹಲವು ದಿನಗಳ ಹಗ್ಗಜಗ್ಗಾಟದ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿ–ಶಿವಸೇನಾ ನಡುವೆ ಕ್ಷೇತ್ರ ಹಂಚಿಕೆ ಅಂತಿಮಗೊಂಡಿದೆ. 50:50ರ ಅನುಪಾತದಲ್ಲಿ ಸೀಟು ಹಂಚಿಕೆ ಆಗಬೇಕು ಎಂಬ ಶಿವಸೇನಾದ ಪಟ್ಟನ್ನು ಬಿಜೆಪಿ ಮಾನ್ಯ ಮಾಡಿಲ್ಲ. ಸೇನಾಕ್ಕೆ 126 ಕ್ಷೇತ್ರಗಳನ್ನು ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಬಿಜೆಪಿ 144 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.ಮಹಾರಾಷ್ಟ್ರ ವಿಧಾನಸಭೆಯ ಸದಸ್ಯ ಬಲ 288.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಪ್ರಮುಖರ ಸಭೆ ಗುರುವಾರ ನಡೆದಿದೆ. ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಹಿರಿಯ ಮುಖಂಡ ನಿತಿನ್‌ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಮತ್ತು ರಾಜ್ಯದ ಇತರ ಕೆಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಇತರ ಮಿತ್ರಪಕ್ಷಗಳಾದ ಆರ್‌ಪಿಐ (ಎ), ರಾಷ್ಟ್ರೀಯ ಸಮಾಜ ಪಕ್ಷ ಮತ್ತು ರೈತ ಕ್ರಾಂತಿ ಸಂಘಟನೆಗೆ ಒಟ್ಟು 18 ಕ್ಷೇತ್ರಗಳನ್ನು ಬಿಟ್ಟುಕೊಡಲು ತೀರ್ಮಾನಿಸಲಾಗಿದೆ.

ADVERTISEMENT

ಈ ನಿರ್ಧಾರದ ಬಳಿಕವೂ ಸಭೆ ಮುಂದುವರಿಯಿತು. ಅಭ್ಯರ್ಥಿಗಳ ಆಯ್ಕೆ ಮತ್ತು ಪ್ರಚಾರ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯಿತು.

ಬಿಜೆಪಿ ಸ್ಪರ್ಧಿಸುವಷ್ಟೇ ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕು ಎಂದು ಸೇನಾ ಪಟ್ಟು ಹಿಡಿದಿತ್ತು. ಹಾಗಾಗಿಯೇ ಕ್ಷೇತ್ರ ಹಂಚಿಕೆ ವಿಳಂಬವಾಗಿತ್ತು. ಒಂದು ವೇಳೆ 50:50ರ ಅನುಪಾತದಲ್ಲಿ ಕ್ಷೇತ್ರ ಹಂಚಿಕೆಗೆ ಬಿಜೆಪಿ ಒಪ್ಪದಿದ್ದರೆ ಈ ಬಾರಿಯೂ ಪ್ರತ್ಯೇಕ ಸ್ಪರ್ಧೆಗೆ ಸೇನಾ ಸಿದ್ಧವಾಗಿದೆ ಎನ್ನಲಾಗಿತ್ತು. ಬಿಜೆಪಿಯಲ್ಲಿಯೂ ಏಕಾಂಗಿ ಸ್ಪರ್ಧೆಯ ಯೋಚನೆ ಇತ್ತು ಎಂದು ಮೂಲಗಳು ಹೇಳಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಉತ್ತಮವಾಗಿತ್ತು. ಹಾಗಾಗಿ, ಏಕಾಂಗಿಯಾಗಿ ಸ್ಪರ್ಧಿಸಿದರೂ ಬಹುಮತ ಪಡೆಯುವ ವಿಶ್ವಾಸ ಪಕ್ಷದ ನಾಯಕರಲ್ಲಿ ಇತ್ತು.

2014ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದವು. ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟವೂ ಒಡೆದು ಹೋಗಿತ್ತು. ಹಾಗಾಗಿ, ಚತುಷ್ಕೋನ ಸ್ಪರ್ಧೆ ಏರ್ಪಟ್ಟಿತ್ತು.

ಕಾಂಗ್ರೆಸ್‌ನಲ್ಲಿ ಚಟುವಟಿಕೆ: ಕಾಂಗ್ರೆಸ್‌ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ತೀವ್ರಗೊಂಡಿದೆ. ಕಾಂಗ್ರೆಸ್‌ ಮತ್ತು ಮೈತ್ರಿಕೂಟದ ಮತ್ತೊಂದು ಪ್ರಮುಖ ಪಕ್ಷ ಎನ್‌ಸಿಪಿ ತಲಾ 125 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಮೈತ್ರಿಕೂಟದ ಇತರ ಸಣ್ಣ ಪಕ್ಷಗಳಿಗೆ 38 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆದಿದೆ.

ಸ್ವಯಂಪ್ರೇರಿತ ನೀತಿ ಸಂಹಿತೆ

ಮುಂದಿನ ಚುನಾವಣೆಗಳ ಸಂದರ್ಭದಲ್ಲಿ ‘ಸ್ವಯಂಪ್ರೇರಿತ ನೀತಿ ಸಂಹಿತೆ ಪಾಲನೆ’ಗೆ ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ ಒಪ್ಪಿಕೊಂಡಿವೆ ಎಂದು ಚುನಾವಣಾ ಆಯೋಗ ಹೇಳಿದೆ.

ಇದು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗೂ ಅನ್ವಯ ಆಗಲಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ನೀತಿ ಸಂಹಿತೆಯನ್ನು ಸ್ವಯಂಪ್ರೇರಿತವಾಗಿ ಅನುಸರಿಸುವುದಾಗಿ ಭಾರತೀಯ ಅಂತರ್ಜಾಲ ಮತ್ತು ಮೊಬೈಲ್‌ ಸಂಘಟನೆ (ಐಎಎಂಎಐ) ತನ್ನ ಸದಸ್ಯರ ಪರವಾಗಿ ಒಪ್ಪಿಗೆ ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.