ಸಾಂದರ್ಭಿಕ ಚಿತ್ರ
ಮುಂಬೈ: ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಠಾಣೆ ಜಿಲ್ಲೆಯಲ್ಲಿ ಶೋಧ ಕಾರ್ಯ ನಡೆಸಿದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) 12 ಮಂದಿಯನ್ನು ಸೋಮವಾರ ಬಂಧಿಸಿದೆ.
ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದ (ಸಿಮಿ) ಸದಸ್ಯರು ಹಾಗೂ ಕಚೇರಿಯ ಮಾಜಿ ಪದಾಧಿಕಾರಿಗಳ ಮನೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಮೊಬೈಲ್ ಫೋನ್‌ಗಳು, ಕತ್ತಿ, ಚಾಕು, ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುಂಬೈಗೆ ಹೊಂದಿಕೊಂಡಿರುವ ಪಡ್ಘಾ ಹಾಗೂ ಬೊರಿವಲಿ ಗ್ರಾಮಗಳಲ್ಲಿ ಎಟಿಎಸ್‌ನ ಮುಂಬೈ ಘಟಕವು ಠಾಣೆ ಗ್ರಾಮಾಂತರ ಪೊಲೀಸರ ನೆರವಿನೊಂದಿಗೆ ಬೆಳಿಗ್ಗೆ 4 ಗಂಟೆಗೆ ಶೋಧ ಕಾರ್ಯ ನಡೆಸಲಾಯಿತು. ಈ ಎರಡು ಗ್ರಾಮಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಸಾಖಿಬ್ ನಾಚನ್, ಆಖಿಬ್ ಸಾಖಿಬ್ ನಾಚನ್, ಅಬ್ದುಲ್ ಲತಿಫ್ ಕಸ್ಕರ್, ಕೈಫ್ ನಾಚನ್ ಮತ್ತು ಶಾಜಿಲ್ ನಾಚನ್ ಸೇರಿದಂತೆ 12 ಮಂದಿಯ ಮನೆಗಳಲ್ಲಿ ಶೋಧ ನಡೆಸಲಾಗಿದೆ. ಸಾಖಿಬ್ ನಾಚನ್ ಮತ್ತು ಸಹಚರರು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಗ್ರಾಮದ ಹಲವರಿಗೆ ಪ್ರಚೋದಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂ ದಲ್ಲಾಳಿ, ‘ಸಿಮಿ’ಯ ಮಾಜಿ ಸದಸ್ಯ ಫರಾಕ್ ಜುಬೇರ್ ಮುಲ್ಲಾ (60) ಎಂಬಾತನ ಮನೆಯಲ್ಲೂ ಶೋಧ ನಡೆಸಲಾಗಿದೆ. ಈತನ ಅಣ್ಣ ಹಸಿಬ್ ಸುಬೇರ್ ಮುಲ್ಲಾ 2002 ಮತ್ತು 2003ರ ಮುಂಬೈ ರೈಲು ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ. ಹಸಿಬ್ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ. ಜತೆಗೆ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ಜೈಲಿನಲ್ಲಿ ಸಾಖಿಬ್ ನಾಚನ್‌ನೊಟ್ಟಿಗೆ 2023ರ ಡಿಸೆಂಬರ್ 9ರಿಂದ ಸೆರೆವಾಸ ಅನುಭವಿಸುತ್ತಿದ್ದಾನೆ.
ಗೋದಾಮಿನಲ್ಲಿ ಕೆಲಸ ಮಾಡುವ ಅಬ್ದುಲ್ ಲತಿಫ್ ಕಸ್ಕರ್ (27) ಎಂಬಾತನ ಮನೆಯನ್ನೂ ಶೋಧಿಸಲಾಗಿದ್ದು, ಈತ ಐಸಿಸ್‌ನ ಮಾಡ್ಯುಲ್ ಪ್ರಕರಣದಲ್ಲಿ ಭದ್ರತಾ ಏಜೆನ್ಸಿಯಿಂದ ಬಂಧಿತನಾಗಿದ್ದ ಫರ್ಹಾನ್ ಸುಸೆಯ ಆಪ್ತನಾಗಿದ್ದ. ಶೋಧ ಕಾರ್ಯದ ವೇಳೆ ಆರು ಮಂದಿ ಮನೆಯಲ್ಲಿ ಲಭ್ಯವಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಗ್ರಹಿಸಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಎಟಿಎಸ್‌ನ ವರದಿ ಹೇಳಿದೆ.
2023ರಲ್ಲಿ ಭಯೋತ್ಪಾದನಾ ಸಂಘಟನೆಯಾದ ಐಸಿಸ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಪಡ್ಘಾ ಸೇರಿದಂತೆ ರಾಷ್ಟ್ರವ್ಯಾಪಿ ನಡೆಸಿದ ಶೋಧ ಕಾರ್ಯದಲ್ಲಿ ಸಾಖಿಬ್ ನಾಚನ್ ಸೇರಿದಂತೆ ಅನೇಕರನ್ನು ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.