ADVERTISEMENT

ಸಿಜೆಐ ಜೊತೆ ವೇದಿಕೆ ಹಂಚಿಕೊಂಡ ಶಿಂದೆ: ವಿರೋಧ ಪಕ್ಷಗಳಿಂದ ಟೀಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 12:57 IST
Last Updated 11 ಸೆಪ್ಟೆಂಬರ್ 2022, 12:57 IST
ಏಕನಾಥ ಶಿಂದೆ
ಏಕನಾಥ ಶಿಂದೆ   

ಮುಂಬೈ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ವಿರುದ್ಧ ವಿರೊಧಪಕ್ಷಗಳ ಮೈತ್ರಿಕೂಟವಾದ ‘ಮಹಾ ವಿಕಾಸ ಅಘಾಡಿ’ ಟೀಕಾ ಪ್ರಹಾರ ನಡೆಸಿದೆ.

ಮುಂಬೈನಲ್ಲಿ ಶನಿವಾರ ನಡೆದ ಸಮಾರಂಭವೊಂದರಲ್ಲಿ ಮುಖ್ಯ ನ್ಯಾಯಮೂರ್ತಿ ಲಲಿತ್‌ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಶಿಂದೆ ಕೂಡಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

‘ಶಿಂದೆ ನೇತೃತ್ವದಲ್ಲಿ ರಚನೆಯಾದ ಮಹಾರಾಷ್ಟ್ರದ ಹೊಸ ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸುಪ್ರೀಂ ಕೋರ್ಟ್‌ ಪರಿಶೀಲನೆ ನಡೆಸುತ್ತಿದೆ. ಈ ವೇಳೆ ಶಿಂದೆ ಅವರು ಮುಖ್ಯ ನ್ಯಾಯಮೂರ್ತಿಗಳ ಜೊತೆ ವೇದಿಕೆ ಹಂಚಿಕೊಂಡಿದ್ದು ಸರಿಯಲ್ಲ’ ಎಂದು ಎನ್‌ಸಿಪಿ ಅಧ್ಯಕ್ಷ ಜಯಂತ್‌ ಪಾಟೀಲ್‌ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್‌ ಕೂಡಾ ಇಂಥದ್ದೇ ಅಭಿಪ್ರಾಯವನ್ನು ಹೊರಹಾಕಿದೆ. ‘ಶಿಂದೆ–ಫಡಣವೀಸ್‌ ನೇತೃತ್ವದ ಸರ್ಕಾರವು ಕಾನೂನು ಸಮ್ಮತವಾಗಿದೆಯೇ ಎಂಬುದನ್ನು ಸುಪ್ರೀಂ ಕೋರ್ಟ್‌ ಪರಿಶೀಲಿಸುತ್ತಿದೆ. ಸದ್ಯದ ಸರ್ಕಾರವಷ್ಟೇ ಅಲ್ಲ, ಸರ್ಕಾರವನ್ನು ಮುನ್ನಡೆಸುತ್ತಿರುವ ವ್ಯಕ್ತಿಯೂ ಅನರ್ಹಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಆ ವೇದಿಕೆಯೇ ಅಸಂಬದ್ಧವಾಗಿ ಕಾಣುತ್ತಿತ್ತು’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಚಿನ್‌ ಸಾವಂತ್‌ ಹೇಳಿದ್ದಾರೆ.

‘ಈ ದಿನಗಳಲ್ಲಿ ನಿಯಮದ ಪ್ರಕಾರ ಏನೂ ನಡೆಯುತ್ತಿಲ್ಲ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ನಾವು ಇದಕ್ಕಾಗಿಯೇ ಹೇಳುವುದು’ ಎಂದು ಶಿವಸೇನೆ ಮುಖ್ಯ ವಕ್ತಾರ ಅರವಿಂದ್‌ ಸಾವಂತ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.