ಗೊಂಡಿಯಾ (ಮಹಾರಾಷ್ಟ್ರ): ಜಿಲ್ಲೆಯ ಆಮ್‌ಗಾಂವ್ ತಹಶೀಲ್ ವ್ಯಾಪ್ತಿಯ ಸೀತೆಪಾರ್ ಗ್ರಾಮದ ಜಮೀನಿನಲ್ಲಿ ನೆಲ ಹದ ಮಾಡುತ್ತಿದ್ದಾಗ ಸ್ಥಳೀಯ ದೇವತೆಯ ಶಿಲಾ ಮೂರ್ತಿಗೆ ಹಾನಿ ಮಾಡಿದ್ದಕ್ಕಾಗಿ ರೈತರೊಬ್ಬರಿಗೆ ಗ್ರಾಮಸ್ಥರು ₹21 ಸಾವಿರ ದಂಡ ಹಾಕಿದ್ದಲ್ಲದೇ, ದಂಡ ಪಾವತಿಸದಿದ್ದರೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಸ್ಥರ ಈ ಬೆದರಿಕೆಗೆ ಅಂಜದ ಆ ರೈತ, ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಸರ್‌ಪಂಚ್ ಮತ್ತು ಇತರೆ ಎಂಟು ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೀತೆಪಾರ್ ಗ್ರಾಮದ ನಿವಾಸಿ ಟಿಕಾರಾಮ್ ಪ್ರೀತಮ್ ಪಾರ್ಧಿ ಅವರು ಜೂ. 12ರಂದು ತಮ್ಮ ಜಮೀನಿನಲ್ಲಿ ನೆಲ ಹದ ಮಾಡುತ್ತಿದ್ದ ವೇಳೆ, ಆಕಸ್ಮಿಕವಾಗಿ ದೇವತೆಯ ಕಲ್ಲಿನ ಮೂರ್ತಿ ಹಾನಿಗೊಳಗಾಯಿತು ಎಂದು ಆಮ್‌ಗಾಂವ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ವಿಲಾಸ್ ನಲೆ ತಿಳಿಸಿದರು.
ಗ್ರಾಮಸ್ಥರು ಆ ದೇವರನ್ನು ‘ಕುಲದೇವತೆ‘ ಎಂದು ನಂಬುತ್ತಾರೆ. ಘಟನೆ ಬಗ್ಗೆ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು, ಟಿಕಾರಾಮ್‌ಗೆ ಕೆಲಸ ನಿಲ್ಲಿಸುವಂತೆ ಒತ್ತಾಯಿಸಿದರು. ನಂತರ ಪಂಚಾಯತ್ ಸಭೆ ಸೇರಿಸಿದರು. ಆ ಸಭೆಯಲ್ಲಿ ಪಾರ್ಧಿ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ₹21 ಸಾವಿರ ದಂಡವನ್ನು ವಿಧಿಸಿದರು. ‘ದಂಡ ಪಾವತಿಸಲು ವಿಫಲವಾದರೆ, ಸಾಮಾಜಿಕ ಬಹಿಷ್ಕಾರ ಎದುರಿಸಬೇಕಾಗುತ್ತದೆ ಎಂದು ಪಂಚಾಯತ್ ತೀರ್ಪು ನೀಡಿತು‘ ಎಂದು ಪಾರ್ಧಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಪಾರ್ಧಿ ಅವರ ದೂರು ಆಧರಿಸಿ ಪೊಲೀಸರು ಗ್ರಾಮದ ಸರ್‌ಪಂಚ್ ಗೋಪಾಲ್ ಫುಲಿಚಾಂದ್ ಮೆಶ್ರಾಮ್, ಪೊಲೀಸ್ ಪಾಟೀಲ್, ಉಲ್ಹಾಸ್‌ರಾವ್ ಬಯ್ಯಲಾಲ್ ಬಿಸೇನ್, ರಾಜೇಂದ್ರ ಹಿವರಾಲ್ ಬಿಸೇನ್, ಪುರನ್‌ಲಾಲ್ ಬಿಸೇನ್, ಯೋಗೇಶ್ ಹಿರಾಲಾಲ್ ಬಿಸೆನ್, ಯಾದವ್‌ರಾವ್ ಶ್ರೀರಾಮ್ ಬಿಸೇನ್, ಪ್ರತಾಪ್ ಲಖನ್ ಬಿಸೇನ್, ಸುಧೀರ್ ಹಿರಾಲಾಲ್ ಬಿಸೇನ್ ಮತ್ತು ಟೇಕ್‌ಚಂದ್ರ ದಾದಿರಾಮ್ ಮಾಧವಿ ವಿರುದ್ಧ ಮಹಾರಾಷ್ಟ್ರದ ಸಾಮಾಜಿಕ ಬಹಿಷ್ಕಾರ ನಿಷೇಧ ಕಾಯ್ದೆ (ನಿಯಂತ್ರಣ, ನಿಷೇಧ ಮತ್ತು ಪರಿಹಾರ) 2016ರ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ.
ದೂರನ್ನು ಆಧರಿಸಿ ಎಲ್ಲ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಇನ್‌ಸ್ಪೆಕ್ಟರ್ ನಲೆ ತಿಳಿಸಿದರು. ಪಂಚಾಯ್ತಿ ವಿಧಿಸಿರುವ ದಂಡದ ಕುರಿತು ಮಾತನಾಡಿದ ಗ್ರಾಮದ ಸರ್‌ಪಂಚ್ ಮೆಶ್ರಾಮ್, ‘ಪ್ರತಿ ವರ್ಷ ಹೊಸ ಹಂಗಾಮು ಶುರು ಮಾಡುವ ಮುನ್ನ ಗ್ರಾಮಸ್ಥರು ಪೂಜೆ ಸಲ್ಲಿಸುವ ದೇವತೆಯ ವಿಗ್ರಹಕ್ಕೆ ಹಾನಿಯಾಗಿದೆ. ಹಾನಿಗೊಳಗಾದ ವಿಗ್ರಹವನ್ನು ದುರಸ್ತಿಗೊಳಿಸಿ, ಅದಕ್ಕೊಂದು ಸಣ್ಣ ಗುಡಿ ಕಟ್ಟಿಸಲು ಪಾರ್ಧಿಗೆ ವಿಧಿಸಿರುವ ದಂಡದ ಹಣವನ್ನು ಬಳಸಲಾಗುತ್ತದೆ‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.