ADVERTISEMENT

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೇರಳದ ನೆರವು ಕೋರಿದ ಮಹಾರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 26 ಮೇ 2020, 7:46 IST
Last Updated 26 ಮೇ 2020, 7:46 IST
ಮಹಾರಾಷ್ಟ್ರ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದ ಸಿಎಂ ಉದ್ಧವ್‌ ಠಾಕ್ರೆ ಅವರನ್ನು ಪರೀಕ್ಷಿಸಿದ ಆರೋಗ್ಯ ಕಾರ್ಯಕರ್ತರು
ಮಹಾರಾಷ್ಟ್ರ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದ ಸಿಎಂ ಉದ್ಧವ್‌ ಠಾಕ್ರೆ ಅವರನ್ನು ಪರೀಕ್ಷಿಸಿದ ಆರೋಗ್ಯ ಕಾರ್ಯಕರ್ತರು    
""
""

ಮುಂಬೈ: ಕೊರೊನಾ ವೈರಸ್‌ ದಾಳಿಯಿಂದಾಗಿ ಜರ್ಜರಿತಗೊಂಡಿರುವ ಮಹಾರಾಷ್ಟ್ರ ಪಿಡುಗಿನ ವಿರುದ್ಧ ಹೋರಾಡಲು ಕೇರಳ ನೆರವನ್ನು ಔಪಚಾರಿಕವಾಗಿ ಕೋರಿದೆ.

ಕೊರೊನಾ ವೈರಸ್‌ ನಿಯಂತ್ರಣಾ ಕ್ರಮಗಳ ಕುರಿತು ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಜೇಶ್ ತೋಪೆ ಅವರು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್‌ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಅದಾದ ಮರುದಿನವೇ ಮಹಾರಾಷ್ಟ್ರ ಸರ್ಕಾರ ವೈದ್ಯರು ಮತ್ತು ದಾದಿಯರ ನೆರವು ಕೋರಿ ಕೇರಳ ಸರ್ಕಾರಕ್ಕೆ ಪತ್ರ ಬರೆದಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್‌–19 ನೋಡಲ್ ಅಧಿಕಾರಿಯಾಗಿರುವ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ ನಿರ್ದೇಶಕ ಡಾ.ಟಿ.ಪಿ.ಲಹಾನೆ ಅವರು ನೆರವು ಕೋರಿ ಶೈಲಾಜಾ ಅವರಿಗೆ ಪತ್ರ ರವಾನಿಸಿದ್ದಾರೆ.

ADVERTISEMENT

ಭವಿಷ್ಯದಲ್ಲಿ ಮುಂಬೈ ಮತ್ತು ಪುಣೆಯಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ಅಲ್ಲಿ ಕೋವಿಡ್‌ ವಿರುದ್ಧ ಹೋರಾಡಲು 50 ತಜ್ಞ ವೈದ್ಯರು ಮತ್ತು ದಾದಿಯರನ್ನು ಕಳುಹಿಸುವಂತೆ ಕೇರಳ ಸರ್ಕಾರವನ್ನು ಕೋರಲಾಗಿದೆ ಎಂದು ಡಾ.ಲಹಾನೆ ತಿಳಿಸಿದ್ದಾರೆ.

ಎಂಬಿಬಿಎಸ್ ವೈದ್ಯರಿಗೆ ತಿಂಗಳಿಗೆ ₹80,000 ಮತ್ತು ಎಂಡಿ / ಎಂಎಸ್ ತಜ್ಞ ವೈದ್ಯರಿಗೆ ತಿಂಗಳಿಗೆ ₹2 ಲಕ್ಷ ಪಾವತಿಸಲು ರಾಜ್ಯವು ಮುಂದಾಗಿದೆ, ತರಬೇತಿ ಪಡೆದ ಶುಶ್ರೂಷಕ ಸಿಬ್ಬಂದಿಗೆ ತಿಂಗಳಿಗೆ ₹30,000 ನೀಡುವುದಾಗಿ ಸರ್ಕಾರ ಹೇಳಿದೆ.

ಈ ವೈದ್ಯಕೀಯ ಸಿಬ್ಬಂದಿಗೆ ಮಹಾರಾಷ್ಟ್ರ ಸರ್ಕಾರ ವಸತಿ, ಊಟ, ಅಗತ್ಯ ಔಷಧ. ವೈಯಕ್ತಿಕ ರಕ್ಷಣಾ ಕಿಟ್‌ಗಳನ್ನು ಪೂರೈಸಲಿದೆ.

ಮುಂದೆ ಎದುರಾಗಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಮುಂಬೈ ನಗರದ ಮಹಾಲಕ್ಷ್ಮಿ ರೇಸ್ ಕೋರ್ಸ್‌ನಲ್ಲಿ 600 ಹಾಸಿಗೆಗಳ ಕೋವಿಡ್‌ ಆರೋಗ್ಯ ಕೇಂದ್ರವನ್ನು ಸ್ಥಾಪಿಪಿಸುತ್ತಿದೆ. ಇದರಲ್ಲಿ 125 ಹಾಸಿಗೆಗಳ ಐಸಿಯು ಕೂಡ ಇರಲಿದೆ. ಇಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರನ್ನೂ ನಿಯೋಜಿಸಲಾಗಿದೆ. ಆದರೆ, ಇನ್ನೂ ಹೆಚ್ಚಿನ ವೈದ್ಯರು ಸಿಬ್ಬಂದಿಯ ಅಗತ್ಯವಿದೆ,’ ಎಂದು ಮಹಾರಾಷ್ಟ್ರ ಸರ್ಕಾರದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.