
ನಾಶಿಕ್: ನಾಶಿಕ್‌ನಲ್ಲಿ ಸೋಮವಾರ ಗಣರಾಜ್ಯೋತ್ಸವ ಭಾಷಣದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರು ಉಲ್ಲೇಖಿಸದಿರುವುದಕ್ಕೆ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಕ್ಷಮೆಯಾಚಿಸಿದ್ದಾರೆ.
ಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣ ಮಾಡಿದ ಮಹಾಜನ್, ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಾಧ್ವಿ ಜಾಧವ್ ಎಂಬವರು, ‘ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸಂಬಂಧವಿಲ್ಲದವರ ಹೆಸರುಗಳನ್ನು ಉಲ್ಲೇಖಿಸುತ್ತಿದ್ದೀರಿ. ಆದರೆ, ಗಣರಾಜ್ಯೋತ್ಸವದ ಗೌರವಕ್ಕೆ ನಿಜವಾಗಿ ಅರ್ಹರಾದ ಅಂಬೇಡ್ಕರ್ ಅವರ ಹೆಸರನ್ನು ಏಕೆ ಹೇಳಲಿಲ್ಲ’ ಎಂದು ಪ್ರಶ್ನಿಸಿದರು. ಈ ವೇಳೆ, ಪೊಲೀಸರು ಮಾಧ್ವಿ ಜಾಧವ್ ಅವರನ್ನು ಸ್ವಲ್ಪ ಸಮಯದವರೆಗೆ ವಶಕ್ಕೆ ಪಡೆದರು.
ಘಟನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಅಂಬೇಡ್ಕರ್ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.