ADVERTISEMENT

ಮಹಾರಾಷ್ಟ್ರ: ಮೃತರ ಸಂಖ್ಯೆ 164ಕ್ಕೆ ಏರಿಕೆ

ತಾಲಿಯೆ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ: ನಾಪತ್ತೆಯಾದ 31 ಮಂದಿ ಮೃತಪಟ್ಟಿದ್ದಾಗಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 19:30 IST
Last Updated 26 ಜುಲೈ 2021, 19:30 IST
ಭಾರಿ ಮಳೆಯಿಂದ ಜಲಾವೃತಗೊಂಡಿರುವ ಮಹಾರಾಷ್ಟ್ರದ ಸಾಂಗ್ಲಿ
ಭಾರಿ ಮಳೆಯಿಂದ ಜಲಾವೃತಗೊಂಡಿರುವ ಮಹಾರಾಷ್ಟ್ರದ ಸಾಂಗ್ಲಿ   

ಮುಂಬೈ: ಮಹಾರಾಷ್ಟ್ರದಲ್ಲಿ ಮಳೆಸಂಬಂಧಿ ಅವಘಡಗಳಿಂದ ಮೃತಪಟ್ಟವರ ಸಂಖ್ಯೆ 164ಕ್ಕೆ ಏರಿದ್ದು, 56ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 2.29 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಭೂಕುಸಿತ ಸಂಭವಿಸಿದ್ದ ರಾಯಗಡದ ತಾಲಿಯೆ ಗ್ರಾಮದಲ್ಲಿ ಸೋಮವಾರ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ನಾಪತ್ತೆಯಾಗಿರುವ 31 ಮಂದಿ ‘ಮೃತಪಟ್ಟಿದ್ದಾರೆ’ ಎಂದು ಘೋಷಿಸಲಾಗಿದೆ ಎಂದು ರಾಯಗಡ ಜಿಲ್ಲಾಧಿಕಾರಿ ನಿಧಿ ಚೌಧರಿ ತಿಳಿಸಿದ್ದಾರೆ. ರಾಯಗಡ ಜಿಲ್ಲೆಯೊಂದರಲ್ಲಿಯೇ 71 ಮಂದಿ ಮೃತಪಟ್ಟಿದ್ದಾರೆ.

ಭಾರಿ ಮಳೆಯಿಂದ, ರಾಯಗಡದ ತಾಲಿಯೆ ಗ್ರಾಮದಲ್ಲಿ ಕಳೆದ ಗುರುವಾರ ಭೂಕುಸಿತ ಉಂಟಾಗಿ ಹಲವು ಮನೆಗಳು ನೆಲಸಮವಾಗಿದ್ದವು. ‘ಕಾಣೆಯಾದವರ ಸಂಬಂಧಿಕರು, ಶೋಧ ನಿಲ್ಲಿಸುವಂತೆ ನಿನ್ನೆಯಿಂದಲೇ ಹೇಳುತ್ತಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಭಿಪ್ರಾಯ ಪಡೆದು ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿರುವ ಕೊಲ್ಲಾಪುರ, ಸಾಂಗ್ಲಿ ಹಾಗೂ ಸಾತಾರ ಜಿಲ್ಲೆಗಳಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಗೆ ಮುಂದಾಗಿದ್ದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಪ್ರತಿಕೂಲ ಹವಾಮಾನದಿಂದಾಗಿ ಸಮೀಕ್ಷೆಯನ್ನುಸೋಮವಾರ ಕೈಬಿಟ್ಟಿದ್ದಾರೆ.

ರಾಜಸ್ಥಾನ ಹಾಗೂ ಗುಜರಾತ್‌ನ ಹಲವೆಡೆ ಭಾರಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.