ಮುಂಬೈ: ಮತದಾನ ಪ್ರಕ್ರಿಯೆಗಳಲ್ಲಿ ನಡೆಯುತ್ತಿರುವ ಅಕ್ರಮದ ಕುರಿತಂತೆ ವಿರೋಧ ಪಕ್ಷಗಳ ಮುಖಂಡರ ನಿಯೋಗವು ಮಂಗಳವಾರ ಮಹಾರಾಷ್ಟ್ರ ಮುಖ್ಯ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿತು.
ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್, ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ, ಕಾಂಗ್ರೆಸ್, ಎಡಪಕ್ಷಗಳ ಮುಖಂಡರು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಎಸ್. ಚೊಕ್ಕಲಿಂಗಂ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ಈ ವರ್ಷಾಂತ್ಯದಲ್ಲಿ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು, ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರು ಸಭೆ ನಡೆಸಲಿದ್ದಾರೆ.
ಎಸ್‌ಐಆರ್ ಮುಂದೂಡಿ: ಕೇಂದ್ರ ಚುನಾವಣಾ ಆಯೋಗಕ್ಕೆ ಆಗ್ರಹ
ಮುಂಬೈ: ಮಹಾರಾಷ್ಟ್ರದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಆಲೋಚನೆ ಇದ್ದರೆ 2026ರ ಜನವರಿ ತಿಂಗಳವರೆಗೂ ಈ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ‘ಸುಪ್ರೀಂಕೋರ್ಟ್ 2025ರ ಮೇ 6ರಂದು ನೀಡಿದ ತೀರ್ಪಿನ ಪ್ರಕಾರ ನಾಲ್ಕು ತಿಂಗಳ ಒಳಗಾಗಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶ ನೀಡಿದೆ. ಸೂಕ್ತವಾದ ಪ್ರಕರಣದಲ್ಲಿ ಮಾತ್ರ ಅವಧಿ ವಿಸ್ತರಿಸಲು ಆಯೋಗಕ್ಕೆ ಅವಕಾಶ ನೀಡಿದೆ. ನ್ಯಾಯಾಲಯದ ಆದೇಶದಂತೆ ಸದ್ಯದಲ್ಲಿಯೇ ಚುನಾವಣೆ ನಡೆಸಬೇಕಿದ್ದು ಚುನಾವಣಾ ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ’ ಎಂದು ಸೆ.9ರಂದು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ‘ರಾಜ್ಯದ 29 ಮಹಾನಗರ ಪಾಲಿಕೆಗಳು 247 ನಗರಸಭೆಗಳು 42 ನಗರ ಪಂಚಾಯತ್ 147 ಪಟ್ಟಣ ಪಂಚಾಯತ್ 32 ಜಿಲ್ಲಾ ಪಂಚಾಯತ್ ಸೇರಿದಂತೆ 336 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಬೇಕು’ ಎಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.