ADVERTISEMENT

ಹಕ್ಕಿ ಜ್ವರ: ಪರ್ಭಣಿಯಲ್ಲಿ 3,400ಕ್ಕೂ ಅಧಿಕ ಕೋಳಿಗಳ ಹತ್ಯೆ

ಪಿಟಿಐ
Published 14 ಜನವರಿ 2021, 10:52 IST
Last Updated 14 ಜನವರಿ 2021, 10:52 IST
ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕರದ್‌ನ ಕೋಳಿ ಫಾರಂನಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿರುವ ಸಿಬ್ಬಂದಿ –ಪಿಟಿಐ ಚಿತ್ರ
ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕರದ್‌ನ ಕೋಳಿ ಫಾರಂನಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿರುವ ಸಿಬ್ಬಂದಿ –ಪಿಟಿಐ ಚಿತ್ರ   

ಔರಂಗಾಬಾದ್‌: ‘ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪರ್ಭಣಿ ಜಿಲ್ಲೆಯ ಮುರುಂಬ ಗ್ರಾಮದಲ್ಲಿ 3,400ಕ್ಕೂ ಅಧಿಕ ಫಾರಂ ಕೋಳಿಗಳನ್ನು ಕೊಲ್ಲಲಾಗಿದೆ’ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಮುರುಂಬ ಗ್ರಾಮದ ಫಾರಂವೊಂದರಲ್ಲಿ ಇತ್ತೀಚೆಗೆ 900ಕ್ಕೂ ಅಧಿಕ ಕೋಳಿಗಳು ಮೃತಪಟ್ಟಿದ್ದವು. ಅವುಗಳಿಗೆ ಹಕ್ಕಿ ಜ್ವರದ ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿತ್ತು. ಹೀಗಾಗಿ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸುತ್ತಲಿನ 1 ಕಿ.ಮೀ.ವ್ಯಾಪ್ತಿಯಲ್ಲಿನ ಹಕ್ಕಿಗಳನ್ನು ಕೊಲ್ಲಲು ತೀರ್ಮಾನಿಸಿತ್ತು.

‘ಬುಧವಾರ ಹಕ್ಕಿಗಳ ಕೊಲ್ಲುವಿಕೆ ಕಾರ್ಯ ಆರಂಭಿಸಲಾಗಿತ್ತು. ರಾತ್ರಿಯ ವೇಳೆಗೆ 3,443 ಹಕ್ಕಿಗಳನ್ನು ಕೊಲ್ಲಲಾಗಿದೆ. ಕುಪ್ಟಾ ಗ್ರಾಮದಲ್ಲೂ ಕೆಲ ಹಕ್ಕಿಗಳು ಸತ್ತಿದ್ದು ಅವುಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ದೀಪಕ್‌ ಮುಗಳಿಕರ್‌ ಹೇಳಿದ್ದಾರೆ.

ADVERTISEMENT

‘ಜಿಲ್ಲೆಯಲ್ಲಿ ಹಕ್ಕಿ ಜ್ವರದ ಹೊಸ ಪ್ರಕರಣಗಳು ವರದಿಯಾಗಿಲ್ಲ. ಮುರುಂಬ ಗ್ರಾಮದ ನಿವಾಸಿಗಳಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸಿಲ್ಲ. ಗ್ರಾಮಸ್ಥರೆಲ್ಲ ಆರೋಗ್ಯವಾಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಹಕ್ಕಿ ಜ್ವರ ಪಸರಿಸುವುದನ್ನು ತಡೆಯುವ ಸಲುವಾಗಿ ಲಾತೂರ್‌ ಜಿಲ್ಲೆಯ ಕೆಂಡ್ರೆವಾಡಿ ಮತ್ತು ಸುಕ್ನಿ ಜಿಲ್ಲೆಗಳಲ್ಲಿ ಇದುವರೆಗೂ 11 ಸಾವಿರಕ್ಕಿಂತಲೂ ಅಧಿಕ ಹಕ್ಕಿಗಳನ್ನು ಕೊಲ್ಲಲಾಗಿದೆ. ವಂಜರವಾಡಿ ಗ್ರಾಮದಲ್ಲಿ ಸತ್ತಿದ್ದ ಹಕ್ಕಿಗಳಿಂದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವುಗಳ ವರದಿ ಬರಬೇಕಿದೆ’ ಎಂದು ಜಿಲ್ಲಾಧಿಕಾರಿ ಬಿ.ಪಿ.ಪೃಥ್ವಿರಾಜ್‌ ಬುಧವಾರ ಹೇಳಿದ್ದರು.

ಕೆಂಡ್ರೆವಾಡಿಯಲ್ಲಿ ಸೋಮವಾರದವರೆಗೆ ಸುಮಾರು 225 ಹಕ್ಕಿಗಳು, ಸುಕ್ನಿ ಮತ್ತು ವಂಜರವಾಡಿಯಲ್ಲಿ ಕ್ರಮವಾಗಿ 12 ಮತ್ತು 4 ಕೋಳಿಗಳು ಸತ್ತಿದ್ದವು.‌

ಜನವರಿ 8ರಿಂದ ಇದುವರೆಗೂ ಮಹಾರಾಷ್ಟ್ರದಲ್ಲಿ 2,000ಕ್ಕೂ ಅಧಿಕ ಹಕ್ಕಿಗಳು ಮೃತಪಟ್ಟಿರುವುದು ವರದಿಯಾಗಿದೆ. ಮುಂಬೈ, ಠಾಣೆ, ಬೀಡ್‌ ಮತ್ತು ದಪೋಲಿಯಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಸತ್ತ ಪಕ್ಷಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ ಮತ್ತು ಪುಣೆಯಲ್ಲಿರುವ ಪ್ರಯೋಗಾಲಯಗಳಿಗೆ ರವಾನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.