ADVERTISEMENT

ಮಹಾರಾಷ್ಟ್ರ: ಬಿಜೆಪಿ ಕಾರ್ಯಕರ್ತ ನಿರ್ಮಿಸಿದ್ದ ದೇಗುಲದಿಂದ ಮೋದಿ ಪುತ್ಥಳಿ ತೆರವು

ಪಿಟಿಐ
Published 19 ಆಗಸ್ಟ್ 2021, 9:31 IST
Last Updated 19 ಆಗಸ್ಟ್ 2021, 9:31 IST
ಪುಣೆಯ ಔದ್‌ ‍ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ನಿರ್ಮಿಸಲಾಗಿದ್ದ ದೇಗುಲ. ಚಿತ್ರ–ಪಿಟಿಐ
ಪುಣೆಯ ಔದ್‌ ‍ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ನಿರ್ಮಿಸಲಾಗಿದ್ದ ದೇಗುಲ. ಚಿತ್ರ–ಪಿಟಿಐ   

‍ಪುಣೆ: ಇಲ್ಲಿನ ಔದ್‌ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ ಮಯೂರ್‌ ಮುಂಡೆ ಎನ್ನುವವರು ಪ‍್ರಧಾನಿ ನರೇಂದ್ರ ಮೋದಿ ಅವರಿಗಾಗಿ ನಿರ್ಮಿಸಿದ್ದ ದೇವಾಲಯದಿಂದ ಈಗ ಅವರ ಪುತ್ಥಳಿಯನ್ನು ತೆರವುಗೊಳಿಸಲಾಗಿದೆ.

ಆದರೆ, ಮೋದಿ ಅವರ ಪುತ್ಥಳಿಯನ್ನು ತೆರವುಗೊಳಿಸಿರುವ ಬಗ್ಗೆ ಮುಂಡೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನರೇಂದ್ರ ಮೋದಿ ಅವರಿಗಾಗಿ ದೇಗುಲ ನಿರ್ಮಿಸಿರುವುದನ್ನು ವಿರೋಧಿಸಿ ಎನ್‌ಸಿಪಿ ಕಾರ್ಯಕರ್ತರು ಗುರುವಾರ ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಿದರು.

ADVERTISEMENT

‘ಪ್ರಧಾನಿ ಮೋದಿ ಅವರಿಗಾಗಿ ದೇವಸ್ಥಾನ ನಿರ್ಮಿಸಲಾಗಿದೆ. ಇನ್ನು ಮುಂದೆ ಪೆಟ್ರೋಲ್‌ ದರ ಮತ್ತು ಹಣದುಬ್ಬರ ಇಳಿಕೆಯಾಗಬಹುದು. ಜನರ ಖಾತೆಯಲ್ಲಿ ₹15 ಲಕ್ಷ ಜಮೆ ಆಗಬಹುದು. ದೇವಸ್ಥಾನದಿಂದ ದೇವರು ಕಾಣೆಯಾಗಿದ್ದರೆಂಬ ವಿಷಯ ತಿಳಿಯಿತು. ಅದನ್ನು ನೋಡಲು ನಾವು ಇಲ್ಲಿಗೆ ಬಂದಿದ್ದೇವೆ’ ಎಂದು ಎನ್‌ಸಿಪಿ ನಗರ ಘಟಕದ ಅಧ್ಯಕ್ಷ ಪ್ರಶಾಂತ್ ಜಗ್ತಾಪ್ ವ್ಯಂಗ್ಯವಾಡಿದರು.

‘ಈ ರೀತಿಯ ದೇವಸ್ಥಾನಗಳನ್ನು ನಿರ್ಮಿಸುವುದು ‘ಬೌದ್ಧಿಕ ದಿವಾಳಿತನದ’ ಸಂಕೇತವಾಗಿದೆ’ ಎಂದು ಅವರು ಟೀಕಿಸಿದರು.

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಇತರ ಕಾರ್ಯಗಳಿಗಾಗಿ ಮೋದಿ ಅವರಿಗೆ ಗೌರವ ಸಲ್ಲಿಸಲು ದೇಗುಲ ನಿರ್ಮಿಸಿದ್ದೇನೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ 370ನೇ ವಿಧಿ ರದ್ಧತಿ, ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಖ್ ನಿಷೇಧ ಸೇರಿದಂತೆ ಹಲವು ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಅವರು ಮಾಡಿದ್ದಾರೆ’ ಎಂದು ಮುಂಡೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.