ADVERTISEMENT

ಮಹಾರಾಷ್ಟ್ರ ಬಿಕ್ಕಟ್ಟು ‘ಸುಪ್ರೀಂ’ಗೆ: ಭಿನ್ನರಿಗೆ ಶಿವಸೇನಾ ಬೆದರಿಕೆ

ಶಾಸಕರ ವಿರುದ್ಧ ಕ್ರಮಕ್ಕೆ ಸೇನಾ ಚಿಂತನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 21:47 IST
Last Updated 26 ಜೂನ್ 2022, 21:47 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ: ಶಿವಸೇನಾದ ಬಂಡಾಯ ಶಾಸಕರ ಗುಂಪು ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರದಿಂದ ಹೊರಬಂದು, ಪ್ರತ್ಯೇಕ ಪಕ್ಷವಾಗಿ ಅಧಿಕೃತವಾಗಿ ಗುರುತಿಸಿಕೊಳ್ಳುವುದರತ್ತ ಮತ್ತಷ್ಟು ಹತ್ತಿರವಾಗಿದೆ. ಈ ಹೊತ್ತಿನಲ್ಲಿ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ಮತ್ತು ಪಕ್ಷದ ಮುಖ್ಯ ವಕ್ತಾರ ಸಂಜಯ ರಾವುತ್‌ ಅವರು, ಬಂಡಾಯ ಶಾಸಕರಿಗೆ ಪರೋಕ್ಷವಾಗಿ ಬೆದರಿಕೆ ಒಡ್ಡಿದ್ದಾರೆ. ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯು ಇನ್ನಷ್ಟು ಪ್ರಕ್ಷುಬ್ಧವಾಗಲು ಇದು ಕಾರಣವಾಗಿದೆ.

ಬಂಡಾಯ ಮುಖಂಡರು ಮತ್ತು ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಎಂವಿಎ ಚಿಂತನೆ ನಡೆಸಿದೆ. ಶಾಸಕ ಸ್ಥಾನದಿಂದ ಅನರ್ಹಗೊಳಿಸುವುದು, ಪಕ್ಷದಿಂದ ಅಮಾನತು ಮತ್ತು ಸಚಿವರನ್ನು ಸಂಪುಟದಿಂದ ಕೈಬಿಡುವುದು ಮುಂತಾದ ಕ್ರಮಗಳು ಇದರಲ್ಲಿ ಸೇರಿವೆ.

ರಾಜಕೀಯ ಬಿಕ್ಕಟ್ಟು ಈಗ ಸುಪ್ರೀಂ ಕೋರ್ಟ್‌ನ ಕದ ತಟ್ಟಿದೆ. ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಮತ್ತು ಇತರ 15 ಶಾಸಕರ ಅನರ್ಹತೆಗೆ ಶಿವಸೇನಾ ನಡೆಸಿರುವ ಪ್ರಯತ್ನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ADVERTISEMENT

ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗುವ ಉದ್ದೇಶವನ್ನೂ ಬಂಡಾಯ ಶಾಸಕರು ಹೊಂದಿದ್ದಾರೆ. ಆದರೆ, ಪರೋಕ್ಷ ಬೆದರಿಕೆಯು ಮುಂಬೈಗೆ ಬಾರದಂತೆ ಶಾಸಕರನ್ನು ತಡೆದಿದೆ ಎನ್ನಲಾಗಿದೆ.

‘ವಿಮಾನ ನಿಲ್ದಾಣದಿಂದ ವಿಧಾನ ಭವನಕ್ಕೆ ವರ್ಲಿಯನ್ನು ಹಾದೇ ಹೋಗಬೇಕು. ಈ ಶಾಸಕರು ಹೋಗಿದ್ದು ಒಳ್ಳೆಯದೇ ಆಯಿತು. ವಂಚಕರಿಗೆ ಪಕ್ಷದಲ್ಲಿ ಸ್ಥಳ ಇಲ್ಲ. ಅವರಿಗಾಗಿ ನಾವು ಏನನ್ನು ಮಾಡಿಲ್ಲ ಎಂಬುದನ್ನುಈ ಶಾಸಕರು ವಿಧಾನಸಭೆಗೆ ಬಂದಾಗ ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೇಳಬೇಕು’ ಎಂದು ಯುವಸೇನಾ ಅಧ್ಯಕ್ಷ ಆದಿತ್ಯ ಠಾಕ್ರೆ ಭಾನುವಾರ ಹೇಳಿದ್ದಾರೆ.

‘ಅವರ ಆತ್ಮಗಳು ಸತ್ತಿವೆ. 40 ದೇಹಗಳು ಗುವಾಹಟಿಯಿಂದ ಬರಲಿವೆ. ಅವುಗಳನ್ನು ನೇರವಾಗಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು’ ಎಂದು ರಾವುತ್‌ ಹೇಳಿದ್ದಾರೆ.

ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ ಸಾಮಂತ್ ಅವರು ಗುವಾಹಟಿ ತಲುಪಿದ್ದು ಬಂಡಾಯ ಶಾಸಕರ ಸಂಖ್ಯೆ ಹೆಚ್ಚಿದೆ. ಗುವಾಹಟಿಯಲ್ಲಿ ಇರುವ ಶಾಸಕರ ಸಂಖ್ಯೆ 50 ತಲುಪಿದೆ. ಇದರಲ್ಲಿ ಪಕ್ಷೇತರರೂ ಸೇರಿದ್ದಾರೆ.

ಈ ಮಧ್ಯೆ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಎಂವಿಎ ಮುಖಂಡರ ಜತೆಗೆ ಸಭೆ ನಡೆಸಿದ್ದಾರೆ.

ಶಾಸಕರಿಗೆ ಭದ್ರತೆ: ಕೇಂದ್ರಕ್ಕೆ ರಾಜ್ಯಪಾಲರ ಪತ್ರ

ಬಂಡಾಯ ಶಾಸಕರಿಗೆ ಅಗತ್ಯ ಬಿದ್ದರೆ ಕೇಂದ್ರದ ಭದ್ರತಾ ಪಡೆಗಳಿಂದ ಭದ್ರತೆ ಒದಗಿಸಬೇಕು. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ತಮ್ಮ ಮನೆಗಳಿಗೆ ನೀಡಿದ್ದ ಭದ್ರತೆಯನ್ನು ಕಾನೂನುಬಾಹಿರವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಸೇನಾದ 38 ಶಾಸಕರು, ಪ್ರಹಾರ್‌ ಜನಶಕ್ತಿ ಪಾರ್ಟಿಯ ಇಬ್ಬರು ಶಾಸಕರು ಮತ್ತು 7 ಪಕ್ಷೇತರ ಶಾಸಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈ ಕಾರಣಕ್ಕೆ ರಾಜ್ಯಪಾಲರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಶಾಸಕರು ಮತ್ತು ಅವರ ಕುಟುಂಬಗಳು ಸುರಕ್ಷಿತ ಎಂಬುದನ್ನುಖಾತರಿಪಡಿಸಿಕೊಳ್ಳಿ ಎಂದು ಮಹಾರಾಷ್ಟ್ರದ ಪೊಲೀಸ್‌ ಮಹಾನಿರ್ದೇಶಕರಿಗೂ ರಾಜ್ಯ‍ಪಾಲರು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.