ADVERTISEMENT

ಮಹಾರಾಷ್ಟ್ರ ರಾಜಕಾರಣ | ಸರ್ಕಾರ ರಚನೆ ಸನ್ನಿಹಿತ

ಶಿವಸೇನಾ ಜತೆಗೆ ಮೈತ್ರಿಗೆ ಸಿಡಬ್ಲ್ಯುಸಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 20:00 IST
Last Updated 21 ನವೆಂಬರ್ 2019, 20:00 IST
ಉದ್ಧವ್‌ ಮತ್ತು ಆದಿತ್ಯ ಠಾಕ್ರೆ
ಉದ್ಧವ್‌ ಮತ್ತು ಆದಿತ್ಯ ಠಾಕ್ರೆ   

ನವದೆಹಲಿ:ಮಹಾರಾಷ್ಟ್ರದಲ್ಲಿ ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿಕೂಟದ ಹೊಸ ಸರ್ಕಾರ ರಚನೆ ಸನ್ನಿಹಿತವಾದಂತೆ ಕಾಣಿಸುತ್ತಿದೆ.

ಸರ್ಕಾರ ರಚನೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿ ಎನ್‌ಸಿಪಿ ಜತೆಗೆ ಸಂಪೂರ್ಣ ಸಹಮತ ಮೂಡಿದೆ. ಮೈತ್ರಿಯ ಸ್ವರೂಪದ ಬಗ್ಗೆ ಶಿವಸೇನಾದ ಜತೆಗೆ ಮಾತುಕತೆ ನಡೆಯಲಿದೆ ಎಂದು ಕಾಂಗ್ರೆಸ್‌ ಮುಖಂಡ ಪೃಥ್ವಿರಾಜ್‌ ಚವಾಣ್‌ ಗುರುವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಶಿವಸೇನಾ ಮತ್ತು ಎನ್‌ಸಿಪಿಯ ಜತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ನಿರ್ಧಾಕ್ಕೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಅನುಮೋದನೆ ನೀಡಿದೆ.

ADVERTISEMENT

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಬೆಳಿಗ್ಗೆ ಸಿಡಬ್ಲ್ಯುಸಿಯ ತುರ್ತು ಸಭೆ ನಡೆಸಿದರು. ಚುನಾವಣಾಪೂರ್ವ ಮೈತ್ರಿ ಹೊಂದಿದ್ದ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮುಖಂಡರು ಶಿವಸೇನಾದ ಜತೆ ಸೇರಿ ಸರ್ಕಾರ ರಚಿಸುವ ಪ್ರಸ್ತಾವವನ್ನು ಸಭೆಗೂ ಮೊದಲೇ ರೂಪಿಸಿದ್ದರು. ಕಾಂಗ್ರೆಸ್‌–ಎನ್‌ಸಿಪಿ ಮುಖಂಡರು ಸರಣಿ ಸಭೆ ನಡೆಸಿ, ಸರ್ಕಾರ ರಚನೆಯ ರೀತಿ ಮತ್ತು ಖಾತೆ ಹಂಚಿಕೆಗೆ ಸಂಬಂಧಿಸಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

‘ಬಹುಶಃ, ನಾಳೆ (ಶುಕ್ರವಾರ) ಅಂತಿಮ ನಿರ್ಧಾರ ಸಾಧ್ಯವಾಗಬಹುದು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಸಿ.ಎಂ. ಹುದ್ದೆಗೆ ಬೇಡಿಕೆ

ಮುಖ್ಯಮಂತ್ರಿ ಹುದ್ದೆ ಕೂಡ ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಒಲವನ್ನು ಎನ್‌ಸಿಪಿ ಹೊಂದಿದೆ. ಮೊದಲ ಎರಡೂವರೆ ವರ್ಷ ಶಿವಸೇನಾದವರು ಮುಖ್ಯಮಂತ್ರಿಯಾದರೆ ಕೊನೆಯ ಎರಡೂವರೆ ವರ್ಷ ಎನ್‌ಸಿಪಿಗೆ ದೊರೆಯಬೇಕು ಎಂಬ ಬೇಡಿಕೆ ಇದೆ ಎನ್ನಲಾಗಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಪೂರ್ಣ ಐದು ವರ್ಷ ಉಪಮುಖ್ಯಮಂತ್ರಿ ಹುದ್ದೆ ದೊರೆಯಲಿದೆ ಎಂಬುದು ಅಧಿಕಾರ ಹಂಚಿಕೆಯ ಸೂತ್ರ ಎಂದು ತಿಳಿದು ಬಂದಿದೆ. ಆದರೆ, ಈ ಮಾದರಿಯ ಅಧಿಕಾರ ಹಂಚಿಕೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಶಿವಸೇನಾದ ಹಿರಿಯ ಮುಖಂಡ ಸಂಜಯ್‌ ರಾವುತ್‌ ಹೇಳಿದ್ದಾರೆ.

ಅಧಿಕಾರ ಹಂಚಿಕೆಯ ಬಗ್ಗೆ ಈಗ ಹರಿದಾಡುತ್ತಿರುವ ಸುದ್ದಿಗಳೆಲ್ಲ ಊಹಾಪೋಹಗಳು ಎಂದು ಚವಾಣ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಯಾರು?

ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆಯವರ ಮಗ ಆದಿತ್ಯ ಠಾಕ್ರೆ ಅವರನ್ನು ‘ಮುಂದಿನ ಮುಖ್ಯಮಂತ್ರಿ’ ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಿಂಬಿಸಲಾಗಿತ್ತು. ಆದರೆ, ಈಗ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಖಚಿತವಾಗಿಲ್ಲ.

‘ಈ ಬಗ್ಗೆ ಶೀಘ್ರವೇ ನಿಮಗೆ ತಿಳಿಯಲಿದೆ. ಶಿವಸೈನಿಕರು ಮತ್ತು ರಾಜ್ಯದ ಜನರಿಗೆ ಉದ್ಧವ್‌ ಠಾಕ್ರೆ ಅವರನ್ನು ಮುಖ್ಯಮಂತ್ರಿಯಾಗಿ ನೋಡಬೇಕು ಎಂಬ ಆಕಾಂಕ್ಷೆ ಇದೆ’ ಎಂದು ಸಂಜಯ್‌ ರಾವುತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.