ADVERTISEMENT

ಮಹಾರಾಷ್ಟ್ರದ ಬರಪ್ರದೇಶಗಳಲ್ಲಿ ಮಳೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 13:39 IST
Last Updated 3 ಆಗಸ್ಟ್ 2019, 13:39 IST
ಠಾಣೆಯ ಮುಳುಗಡೆಯಾದ ಪ್ರದೇಶಗಳಲ್ಲಿ ಸಿಲುಕಿದವರನ್ನು ದೋಣಿಯ ಮೂಲಕ ರಕ್ಷಿಸಲಾಯಿತು
ಠಾಣೆಯ ಮುಳುಗಡೆಯಾದ ಪ್ರದೇಶಗಳಲ್ಲಿ ಸಿಲುಕಿದವರನ್ನು ದೋಣಿಯ ಮೂಲಕ ರಕ್ಷಿಸಲಾಯಿತು   

ಮುಂಬೈ: ಮಹಾರಾಷ್ಟ್ರದ ಬರಪೀಡಿತ ಮರಾಠವಾಡ ಮತ್ತು ವಿದರ್ಭ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಜನರು ಹರ್ಷಗೊಂಡಿದ್ದಾರೆ. ಈ ಪ್ರದೇಶಗಳ ಹಲವು ನದಿಗಳು ತುಂಬಿ ಹರಿಯುತ್ತಿವೆ.

ಕರಾವಳಿಯ ಕೊಂಕಣ ಪ್ರದೇಶ, ಪಶ್ಚಿಮ ಮಹಾರಾಷ್ಟ್ರ ಮತ್ತು ಉತ್ತರ ಮಹಾರಾಷ್ಟ್ರಗಳಲ್ಲಿಯೂ ಶುಕ್ರವಾರ ಮತ್ತು ಶನಿವಾರ ಉತ್ತಮ ಮಳೆಯಾಗಿದೆ. ಗೋದಾವರಿ, ಕೃಷ್ಣಾ, ಕೊಯ್ನಾ, ಪಂಚಗಂಗಾ ಮತ್ತು ಇಂದ್ರಾವತಿಯಂತಹ ದೊಡ್ಡ ನದಿಗಳು ಉಕ್ಕಿ ಹರಿಯುತ್ತಿವೆ. ನಾಗಪುರ ನಗರದಲ್ಲಿಯೂ ಎರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.

ಮಹಾರಾಷ್ಟ್ರ ಮತ್ತು ಮುಂಬೈಯಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಉಪ ಮಹಾನಿರ್ದೇಶಕ ಕೆ.ಎಸ್‌. ಹೊಸಳಿಕರ್‌ ಹೇಳಿದ್ದಾರೆ.

ADVERTISEMENT

ನಾಸಿಕ್‌ನ ಪವಿತ್ರ ರಾಮಕುಂಡ ಪ್ರದೇಶವು ಗೋದಾವರಿಯ ಪ್ರವಾಹದಿಂದಾಗಿ ಮುಳುಗಡೆಯಾಗಿದೆ. ಈ ಪ್ರದೇಶದ ಹಲವು ದೇವಾಲಯಗಳು ಮುಳುಗಿವೆ. ಕೊಂಕಣದಿಂದ ಗಡ್ಚಿರೋಲಿವರೆಗಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಕೊಯ್ನಾ ನದಿಯ ಜಲಾನಯನ ಪ್ರದೇಶವಾದ ಸಾತಾರಾ ಜಿಲ್ಲೆಯಲ್ಲಿ ಹತ್ತು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಅಣೆಕಟ್ಟೆಯ ಏಳು ಗೇಟುಗಳನ್ನು ತೆರೆಯಲಾಗಿದ್ದು, ಕೆಳ ಭಾಗದ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.

ಸಹ್ಯಾದ್ರಿ ತಪ್ಪಲಿನ ರಾಯಗಡ ಜಿಲ್ಲೆಯಲ್ಲಿನ ಮಳೆಯಿಂದಾಗಿ ಮಹಾಡ್‌, ನಾಗೊಠಾಣೆ ಮತ್ತು ರೋಹಾ ಪಟ್ಟಣಗಳಲ್ಲಿ ಪ್ರವಾಹ ಉಂಟಾಗಿದೆ. ಕಶೇಡಿ ಘಾಟ್‌ನಲ್ಲಿ ಭೂಕುಸಿತವಾಗಿದೆ.

ಕೊಲ್ಹಾಪುರದಲ್ಲಿರುವ ರಾಧಾನಗ್ರಿ ಅಣೆಕಟ್ಟೆಯ ಐದು ಗೇಟುಗಳನ್ನು ತೆರೆಯಲಾಗಿದೆ. ಇದು ಪಂಚಗಂಗಾ ನದಿಯಲ್ಲಿ ಪ್ರವಾಹಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.