ADVERTISEMENT

ಕಚೇರಿಯಲ್ಲಿ ಬಾಲಿವುಡ್ ಹಾಡು ಹಾಡಿದ್ದಕ್ಕೆ ತಹಶೀಲ್ದಾರ್ ಅಮಾನತು..ಇಲ್ಲಿದೆ ಮಾಹಿತಿ

ಪಿಟಿಐ
Published 17 ಆಗಸ್ಟ್ 2025, 13:09 IST
Last Updated 17 ಆಗಸ್ಟ್ 2025, 13:09 IST
<div class="paragraphs"><p>ಅಮಾನತು</p></div>

ಅಮಾನತು

   

ಲಾತೂರ್: ಮಹಾರಾಷ್ಟ್ರದ ಉಮ್ರಿಯ ತಮ್ಮ ಕಚೇರಿಯಲ್ಲಿ ಅಧಿಕೃತ ಕುರ್ಚಿ ಮೇಲೆ ಕುಳಿತು ಬಾಲಿವುಡ್ ಹಾಡು ಹಾಡಿದ ತಹಶೀಲ್ದಾರ್‌ ಅವರನ್ನು ಅಮಾನತು ಮಾಡಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, 1981ರ ಅಮಿತಾಭ್ ಬಚ್ಚನ್ ಅಭಿನಯದ 'ಯಾರಾನಾ' ಚಿತ್ರದ 'ಯಾರಾ ತೇರಿ ಯಾರಿ ಕೋ' ಹಾಡನ್ನು ತಹಶೀಲ್ದಾರ್ ಪ್ರಶಾಂತ್ ಥೋರಟ್ ಉತ್ಸಾಹದಿಂದ ಹಾಡುತ್ತಿರುವುದು ಕಂಡುಬಂದಿದೆ. ಅವರ ಸುತ್ತಮುತ್ತಲಿನವರು ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹ ನೀಡಿದ್ದಾರೆ. ಅವರ ಹಿಂದಿನ ಫಲಕದಲ್ಲಿ ತಾಲೂಕಾ ಮ್ಯಾಜಿಸ್ಟ್ರೇಟ್ ಎಂದು ಬರೆದಿರುವುದು ಕಾಣುತ್ತಿದೆ.

ADVERTISEMENT

ನಾಂದೇಡ್ ಜಿಲ್ಲೆಯ ಉಮ್ರಿಯಲ್ಲಿ ನಿಯೋಜನೆಗೊಂಡಿದ್ದ ಥೋರಟ್ ಅವರನ್ನು ನೆರೆಯ ಲಾತೂರ್‌ನ ರೇನಾಪುರಕ್ಕೆ ವರ್ಗಾಯಿಸಲಾಗಿತ್ತು. ಜುಲೈ 30 ರಂದು ಅವರನ್ನು ಬಿಡುಗಡೆ ಮಾಡಲಾಗಿತ್ತು. ಅವರು ಅದೇ ದಿನ ತಮ್ಮ ಹೊಸ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಎರಡೂ ಜಿಲ್ಲೆಗಳು ಮರಾಠವಾಡ ವಿಭಾಗದ ಭಾಗವಾಗಿವೆ.

ಆಗಸ್ಟ್ 8ರಂದು, ಉಮ್ರಿ ತಹಶೀಲ್ದಾರ್ ಕಚೇರಿಯು ಥೋರಟ್‌ಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ಸಮಯದಲ್ಲಿ, ಸಿಬ್ಬಂದಿಯ ಸಮ್ಮುಖದಲ್ಲಿ ಥೋರಟ್ ಕಿಶೋರ್ ಕುಮಾರ್ ಅವರ 'ಯಾರಾ ತೇರಿ ಯಾರಿ ಕೋ' ಹಾಡನ್ನು ಹಾಡಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಭಾರಿ ಚರ್ಚೆ ಹುಟ್ಟು ಹಾಕಿತ್ತು. ಜವಾಬ್ದಾರಿಯುತ ಸರ್ಕಾರಿ ಹುದ್ದೆ ಹೊಂದಿರುವ ವ್ಯಕ್ತಿಗೆ ಇಂತಹ ನಡವಳಿಕೆ ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ವಿವಾದದ ಕುರಿತಂತೆ ಅರಿತ ನಾಂದೇಡ್ ಜಿಲ್ಲಾಧಿಕಾರಿ ಈ ಸಂಬಂಧ ಉನ್ನತಾಧಿಕಾರಿಗಳಿಗೆ ವರದಿ ನೀಡಿದ್ದರು. ಅದರಲ್ಲಿ, ಆಡಳಿತದ ಘನತೆಗೆ ಧಕ್ಕೆ ತಂದಿರುವ ತಹಶೀಲ್ದಾರ್, 1979ರ ಮಹಾರಾಷ್ಟ್ರದ ನಾಗರಿಕ ಸೇವಾ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

ವರದಿ ಆಧರಿಸಿ ಕಂದಾಯ ವಿಭಾಗೀಯ ಆಯುಕ್ತ ಜಿತೇಂದ್ರ ಪಾಪಲ್ಕರ್ ಅವರು ತಹಶೀಲ್ದಾರ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.