ADVERTISEMENT

ಪವಾರ್‌ ‘ಪವರ್‌’ ಪ್ರದರ್ಶನ

ಮಹಾರಾಷ್ಟ್ರ: ಫಡಣವೀಸ್‌, ಅಜಿತ್‌ ರಾಜೀನಾಮೆ, ಉದ್ಧವ್‌ ಅಧಿಕಾರಕ್ಕೇರಲು ವೇದಿಕೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 19:52 IST
Last Updated 26 ನವೆಂಬರ್ 2019, 19:52 IST
ಶರದ್‌ ಪವಾರ್‌ ಅವರು ಮಹಾ ವಿಕಾಸ ಅಘಾಡಿಯ ನಾಯಕ ಉದ್ಧವ್‌ ಠಾಕ್ರೆ ಅವರನ್ನು ಮುಂಬೈನಲ್ಲಿ ಮಂಗಳವಾರ ಅಭಿನಂದಿಸಿದರು – ಪಿಟಿಐ ಚಿತ್ರ
ಶರದ್‌ ಪವಾರ್‌ ಅವರು ಮಹಾ ವಿಕಾಸ ಅಘಾಡಿಯ ನಾಯಕ ಉದ್ಧವ್‌ ಠಾಕ್ರೆ ಅವರನ್ನು ಮುಂಬೈನಲ್ಲಿ ಮಂಗಳವಾರ ಅಭಿನಂದಿಸಿದರು – ಪಿಟಿಐ ಚಿತ್ರ   

ಮುಂಬೈ: ಕೆಲವು ದಿನಗಳಿಂದ ಭಾರಿ ಕುತೂಹಲ ಕೆರಳಿಸುತ್ತಲೇ ಸಾಗಿದ್ದ ಮಹಾರಾಷ್ಟ್ರದ ಸರ್ಕಾರ ರಚನೆ ರಾಜಕಾರಣದ ಮೊದಲ ಹಂತವು ಮುಗಿದು, ಎರಡನೇ ಹಂತ ಆರಂಭವಾಗಿದೆ.

ಬಿಜೆಪಿಯ ಜತೆ ಸೇರಿ ಸರ್ಕಾರ ರಚಿಸಿದ ತಮ್ಮ ಅಣ್ಣನ ಮಗ ಅಜಿತ್‌ ಪವಾರ್‌ ಬಂಡಾಯವನ್ನು ದಮನ ಮಾಡುವಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಯಶಸ್ವಿಯಾಗಿದ್ದಾರೆ. ಹಾಗಾಗಿ, ಶನಿವಾರವಷ್ಟೇ ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ದೇವೇಂದ್ರ ಫಡಣವೀಸ್‌ ಮತ್ತು ಉಪಮುಖ್ಯಮಂತ್ರಿಯಾಗಿದ್ದ ಅಜಿತ್‌ ಅವರು ಮಂಗಳವಾರ ಸಂಜೆಯ ಹೊತ್ತಿಗೆ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದಾರೆ.

ಎನ್‌ಸಿಪಿ ಶಾಸಕರು ಪಕ್ಷ ತೊರೆದು ಹೋಗದಂತೆ ನೋಡಿಕೊಂಡ ಪವಾರ್‌ ಅವರು ಮಹಾರಾಷ್ಟ್ರ ರಾಜಕಾರಣದಲ್ಲಿ ತಮ್ಮ ಶಕ್ತಿ (ಪವರ್‌) ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿ, ಈಗ ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಜತೆಗೂಡಿ ಮಾಡಿಕೊಂಡಿರುವ ಮೈತ್ರಿಕೂಟ ‘ಮಹಾ ವಿಕಾಸ ಅಘಾಡಿ’ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದೆ.

ADVERTISEMENT

ಮಹಾ ವಿಕಾಸ ಅಘಾಡಿಯ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಅಘಾಡಿಯ ಪಕ್ಷಗಳು ಅವರನ್ನು ತಮ್ಮ ನಾಯಕ ಎಂದು ಘೋಷಿಸಿವೆ.

ಶನಿವಾರ ಬೆಳಿಗ್ಗೆ 7.50ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರು, 80 ತಾಸಿನ ಬಳಿಕ ಮಂಗಳವಾರ ಸಂಜೆಯ ಹೊತ್ತಿಗೆ ರಾಜೀನಾಮೆ ನೀಡುವುದರೊಂದಿಗೆ ಸರ್ಕಾರ ರಚನೆ ರಾಜಕಾರಣದಒಂದು ಹಂತ ಕೊನೆಗೊಂಡಿತು.

ಫಡಣವೀಸ್‌ ಅವರಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟದ್ದನ್ನು ಪ್ರಶ್ನಿಸಿ ಅಘಾಡಿಯ ಮುಖಂಡರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಬುಧವಾರವೇ ವಿಶ್ವಾಸಮತ ಯಾಚನೆ ಮಾಡುವಂತೆ ಫಡಣವೀಸ್‌ ಅವರಿಗೆ ಸೂಚಿಸಿತ್ತು. ‘ಶಾಸಕರ ಖರೀದಿ’ ಸಾಧ್ಯತೆ ಇರುವುದರಿಂದ ವಿಶ್ವಾಸಮತ ತಕ್ಷಣವೇ ನಡೆಯಬೇಕು ಎಂದಿತ್ತು.

ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅಜಿತ್‌ ಪವಾರ್‌ ಅವರು, ಈ ತೀರ್ಪು ಪ್ರಕಟವಾದ ಸ್ವಲ್ಪ ಹೊತ್ತಿನಲ್ಲಿ ರಾಜೀನಾಮೆ ನೀಡಿದರು. ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದಾಗಿ ಅವರು ಹೇಳಿದ್ದಾರೆ. ಎನ್‌ಸಿಪಿಯ ಶಾಸಕರ ಬೆಂಬಲ ಬಿಜೆಪಿ ಸರ್ಕಾರಕ್ಕೆ ಇದೆ ಎಂಬ ಪತ್ರವನ್ನು ಅಜಿತ್‌ ಅವರು ಫಡಣವೀಸ್‌ ಅವರಿಗೆ ನೀಡಿದ್ದರು. ಆದರೆ, ಅಜಿತ್‌ ರಾಜೀನಾಮೆ ನೀಡಿರುವುದರಿಂದ ಬಹುಮತಕ್ಕೆ ಬೇಕಾದಷ್ಟು ಸಂಖ್ಯಾಬಲ ತಮ್ಮ ಪಕ್ಷಕ್ಕೆ ಇಲ್ಲ ಎಂದು ಫಡಣವೀಸ್‌ ಹೇಳಿದ್ದಾರೆ.

ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರ ಪ್ರಮಾಣವಚನ ಬುಧವಾರ ಸಂಜೆ 5 ಗಂಟೆಯೊಳಗೆ ನಡೆಯುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಹಂಗಾಮಿ ಸ್ಪೀಕರ್‌ ಆಯ್ಕೆ ನಡೆಯಬೇಕು. ಶಾಸಕರ ಪ್ರಮಾಣವಚನದ ಬಳಿಕ ವಿಶ್ವಾಸಮತ ಯಾಚನೆ ಆಗಬೇಕು. ರಹಸ್ಯ ಮತದಾನ ನಡೆಸಬಾರದು ಮತ್ತು ಇಡೀ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡಬೇಕು ಎಂದು ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರಿಗೆ ಸುಪ್ರೀಂ ಕೋರ್ಟ್‌ ಹೇಳಿತ್ತು.

ಸರ್ಕಾರ ರಚಿಸಲು ಹಕ್ಕು ಮಂಡನೆ

ಮಹಾ ವಿಕಾಸ್‌ ಅಘಾಡಿಯ ನಾಯಕನಾಗಿ ಶಿವಸೇನಾದ ಉದ್ಧವ್‌ ಠಾಕ್ರೆ ಅವರನ್ನು ಮಂಗಳವಾರ ರಾತ್ರಿ ಆಯ್ಕೆ ಮಾಡಲಾಗಿದೆ. ಅದಾದ, ಬಳಿಕ ಅವರು ರಾಜ್ಯಪಾಲ ಕೋಶಿಯಾರಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.

ಗುರುವಾರ(ನವೆಂಬರ್ 28) ಸಂಜೆ 6.40ಕ್ಕೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಸೇನಾದ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾದ ಬಳಿಕ, ದೆಹಲಿಗೆ ಹೋಗಿ ದೊಡ್ಡಣ್ಣನನ್ನು ಭೇಟಿಯಾಗಲಿದ್ದೇನೆ ಎಂದು ಉದ್ಧವ್‌ ಹೇಳಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಧವ್‌ ಅವರನ್ನು ತಮ್ಮ ಎಂದು ಕರೆದಿದ್ದರು.

‘ಮಹಾ’ ರಾಜಕೀಯ: ದಿನದ ಬೆಳವಣಿಗೆ

ರಾತ್ರಿ: 8.02: ಶಿವಸೇನಾದ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆ

7.21: ಟ್ರೈಡೆಂಟ್ ಹೋಟೆಲ್‌ನಲ್ಲಿ ಸೇನಾ–ಎನ್‌ಸಿಪಿ–ಕಾಂಗ್ರೆಸ್ ಪಕ್ಷದ ಶಾಸಕರ ಸಭೆ

5.52: ಬುಧವಾರ ಬೆಳಿಗ್ಗೆ ವಿಧಾನಸಭೆ ಅಧಿವೇಶನ ಕರೆದ ರಾಜ್ಯಪಾಲ ಕೋಶಿಯಾರಿ

5.06: ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಕಾಳಿದಾಸ ಕೊಳಂಬಕರ್ ಪ್ರಮಾಣವಚನ

4.34: ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಫಡಣವೀಸ್

3.42: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದದೇವೇಂದ್ರ ಫಡಣವೀಸ್

3.20: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ

ಮಧ್ಯಾಹ್ನ: 3.01: ಪ್ರಧಾನಿ ನರೇಂದ್ರ ಮೋದಿ ಜತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಸಭೆ

ಬೆಳಿಗ್ಗೆ: 11.30: ಸಂಸತ್ ಜಂಟಿ ಅಧಿವೇಶನದಿಂದ ಹೊರಗುಳಿದ ಸೇನಾ–ಕಾಂಗ್ರೆಸ್–ಎನ್‌ಸಿಪಿ ಮೈತ್ರಿಕೂಟ

10.39: ಬುಧವಾರ ವಿಶ್ವಾಸಮತ ಸಾಬೀತುಪಡಿಸಲು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

*****

ಶಾಸಕರನ್ನು ಖರೀದಿಸದಿರಲು ಮೊದಲೇ ನಿರ್ಧರಿಸಿದ್ದೆವು. ಎನ್‌ಸಿಪಿ ಬೆಂಬಲದಿಂದಾಗಿ ಸರ್ಕಾರ ರಚಿಸಿದೆವು. ಅಜಿತ್‌ ರಾಜೀನಾಮೆಯಿಂದ ನಮಗೆ ಸಂಖ್ಯಾ ಬಲ ಇಲ್ಲ
-ದೇವೇಂದ್ರ ಫಡಣವೀಸ್‌,
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ

30 ವರ್ಷದಿಂದ ಗೆಳೆಯರಾಗಿದ್ದವರು ನನ್ನನ್ನು ನಂಬಲಿಲ್ಲ. ನಾವು ಯಾರ ವಿರುದ್ಧ 30 ವರ್ಷಗಳಿಂದ ಹೋರಾಡಿದ್ದೆವೋ ಅವರು ನನ್ನನ್ನು ನಂಬಿದ್ದಾರೆ
-ಉದ್ಧವ್‌ ಠಾಕ್ರೆ,
ಮಹಾ ವಿಕಾಸ ಅಘಾಡಿಯ ಮುಖ್ಯಮಂತ್ರಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.