ADVERTISEMENT

ಕುಂಭಮೇಳ: 1 ಕೋಟಿ ಮಂದಿಯಿಂದ ಪವಿತ್ರ ಸ್ನಾನ

ಪಿಟಿಐ
Published 4 ಮಾರ್ಚ್ 2019, 16:57 IST
Last Updated 4 ಮಾರ್ಚ್ 2019, 16:57 IST
ಮಹಾಶಿವರಾತ್ರಿಯಂದ ಸೋಮವಾರ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು–ಪಿಟಿಐ ಚಿತ್ರ
ಮಹಾಶಿವರಾತ್ರಿಯಂದ ಸೋಮವಾರ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು–ಪಿಟಿಐ ಚಿತ್ರ   

ಅಲಹಾಬಾದ್‌:ಕುಂಭಮೇಳದ ಕೊನೆಯ ಪವಿತ್ರ ಸ್ನಾನ ಮಹಾಶಿವರಾತ್ರಿ ದಿನವಾದ ಸೋಮವಾರ (ಮಾರ್ಚ್‌ 4) ನಡೆದಿದ್ದು, ಗಂಗಾ, ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿ ಸಂಗಮ ಕ್ಷೇತ್ರದಲ್ಲಿ1ಕೋಟಿಮಂದಿ ಮಿಂದೆದ್ದರು.

ಕೊನೆಯ ಸ್ನಾನದ ಮೂಲಕ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ತೆರೆ ಬಿತ್ತು.

‘ಮಕರಸಂಕ್ರಾಂತಿಯಿಂದ (ಜನವರಿ 15) ಆರಂಭವಾದ ಕುಂಭಮೇಳದಲ್ಲಿ ಈವರೆಗೆ 22 ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದರು. ಕೊನೆಯ ದಿನದಂದು 1.10 ಕೋಟಿ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ’ ಎಂದು ಕುಂಭಮೇಳದ ಅಧಿಕಾರಿ ವಿಜಯ್‌ ಕಿರಣ್‌ ಆನಂದ್‌ ತಿಳಿಸಿದ್ದಾರೆ.

ADVERTISEMENT

ದೇಶದ ವಿವಿಧ ಭಾಗಗಳಿಂದ ಭಾನುವಾರ ಮಧ್ಯರಾತ್ರಿಯ ಹೊತ್ತಿಗೆ ಅಪಾರ ಸಂಖ್ಯೆಯಲ್ಲಿ ಬಂದ ಯಾತ್ರಾರ್ಥಿಗಳು, ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಎಲ್ಲ ಸ್ನಾನ ಘಟ್ಟಗಳು ಭಕ್ತರಿಂದ ತುಂಬಿತುಳುಕಿದವು. ಸಣ್ಣ ಪ್ರಮಾಣದಲ್ಲಿ ಸುರಿದ ಮಳೆಯನ್ನೂ ಲೆಕ್ಕಿಸದೇ ಭಕ್ತರು ಪವಿತ್ರ ಸ್ನಾನ ಮಾಡಿದರು. ‘ಹರ ಹರ ಮಹಾದೇವ’ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಮಹಾಶಿವರಾತ್ರಿಯು ಶಿವನ ಭಕ್ತರಿಗೆ ಅತ್ಯಂತ ಮಹತ್ವದ ದಿನ. ಅದು ಸಹಶಿವನ ಸ್ಮರಣೆಯ ದಿನ ಎಂದೇ ಹೇಳಲಾಗುವ ಸೋಮವಾರವೇ ಬಂದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಶಿವಲಿಂಗಕ್ಕೆ ರುದ್ರಾಭಿಷೇಕ ಸಹ ನಡೆಯಿತು.

ಈಗಾಗಲೇ ಕುಂಭಮೇಳದಲ್ಲಿ ಮಕರ ಸಂಕ್ರಾಂತಿ (ಜ. 15),ಮೌನಿ ಅಮವಾಸ್ಯೆ (ಫೆಬ್ರುವರಿ 4),ವಸಂತ ಪಂಚಮಿ (ಫೆಬ್ರುವರಿ 10),ಪೌಶ್‌ ಪೂರ್ಣಿಮೆ (ಜ. 21) ಹಾಗೂಮಘಿ ಪೂರ್ಣಿಮೆ (ಫೆ. 19) ದಿನದಂದು ನಡೆದ ಪವಿತ್ರ ಸ್ನಾನದಲ್ಲಿ ಕೋಟ್ಯಂತರ ಭಕ್ತರು ಪಾಲ್ಗೊಂಡಿದ್ದರು.

ಹೆಚ್ಚಿನ ಸಂಖ್ಯೆಯ ಭಕ್ತರ ನಿರೀಕ್ಷೆಯಿದ್ದ ಕಾರಣ, ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಯಾವುದೇ ನೂಕುನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.