
‘ಹುತಾತ್ಮರ ದಿನ’ದ ಅಂಗವಾಗಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ನವದೆಹಲಿಯ ‘ಗಾಂಧಿ ಸ್ಮೃತಿ’ಯಲ್ಲಿ ಗೌರವ ಅರ್ಪಿಸಿದರು
– ಪಿಟಿಐ ಚಿತ್ರ
ನವದೆಹಲಿ: ಮಹಾತ್ಮ ಗಾಂಧಿ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ‘ಭಾರತದ ಅಮರ ಆತ್ಮ’. ಅವರ ವಿಚಾರ, ಸಿದ್ಧಾಂತವನ್ನು ಅಳಿಸಲು ವಿಭಿನ್ನ ಸಮಯಗಳಲ್ಲಿ ಹಲವರು ನಡೆಸಿದ ಪ್ರಯತ್ನಗಳು ವಿಫಲವಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
‘ಸ್ವಾತಂತ್ರ್ಯದ ಜತೆಗೆ ಸತ್ಯದ ಶಕ್ತಿಯನ್ನು ಗಾಂಧಿ ಸಾರಿದ್ದಾರೆ. ಸತ್ಯದ ಶಕ್ತಿಯು ಅಧಿಕಾರದ ಶಕ್ತಿಗಿಂತ ದೊಡ್ಡದು ಎಂಬ ಮೂಲಭೂತ ತತ್ವವನ್ನು ಅವರು ದೇಶಕ್ಕೆ ನೀಡಿದ್ದಾರೆ’ ಎಂದು ರಾಹುಲ್ ಸ್ಮರಿಸಿದರು.
‘ಒಂದು ಸಾಮ್ರಾಜ್ಯ, ದ್ವೇಷದ ಸಿದ್ಧಾಂತ ಮತ್ತು ಅಧಿಕಾರದಲ್ಲಿದ್ದವರ ದುರಹಂಕಾರವು ವಿಭಿನ್ನ ಸಮಯಗಳಲ್ಲಿ ಗಾಂಧೀಜಿ ಅವರನ್ನು ಅಳಿಸಲು ವಿಫಲ ಯತ್ನ ನಡೆಸಿವೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾಂಧೀಜಿ ಅವರು ಭಾರತೀಯರ ಮನದಲ್ಲಿ ಅಮರವಾಗಿರುವ ಕಾರಣ, ಅವರ ಚಿಂತನೆಗಳನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಹುತಾತ್ಮರ ದಿನ ರಾಷ್ಟ್ರಪಿತನಿಗೆ ನಮನಗಳನ್ನು ಸಲ್ಲಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಬಾಪು ಅವರು ಸತ್ಯ, ಅಹಿಂಸೆ ಮತ್ತು ಕರುಣೆಯ ಪ್ರತಿಪಾದಕರಾಗಿದ್ದರು’ ಎಂದು ಸ್ಮರಿಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಗೌರವ ಅರ್ಪಿಸಿದ್ದಾರೆ.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಹಿಂದೂ ಮಹಾಸಭಾ ಮತ್ತು ಆರ್‌ಎಸ್‌ಎಸ್ ಚಟುವಟಿಕೆ ಖಂಡಿಸಿ ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ 1948ರಲ್ಲಿ ಬರೆದಿದ್ದ ಎರಡು ಪ್ರತ್ಯೇಕ ಪತ್ರಗಳನ್ನು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಹಂಚಿಕೊಂಡು ಆರ್‌ಎಸ್‌ಎಸ್ ಅನ್ನು ಟೀಕಿಸಿದ್ದಾರೆ.
ಗಾಂಧಿ ಅವರು ಹತ್ಯೆಯಾದ 1948ರ ಜನವರಿ 30ರಂದು ನೆಹರೂ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಮಾಡಿದ ಭಾಷಣದ ಲಿಂಕ್ ಅನ್ನೂ ಅವರು ಹಂಚಿಕೊಂಡಿದ್ದಾರೆ.
ನಿಷೇಧದ ಆದೇಶವನ್ನು ಧಿಕ್ಕರಿಸಿ ಹಿಂದೂ ಮಹಾಸಭಾವು ಪುಣೆ, ಅಹ್ಮದ್‌ನಗರ, ದೆಹಲಿಯಲ್ಲಿ ಸಭೆಗಳನ್ನು ನಡೆಸಿದೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ಮಹಾತ್ಮ ಗಾಂಧಿಯವರು ಒಂದು ಅಡಚಣೆಯಾಗಿದ್ದಾರೆ. ಅವರು ಬೇಗ ಸತ್ತಷ್ಟೂ ದೇಶಕ್ಕೆ ಒಳ್ಳೆಯದು ಎಂಬ ಭಾಷಣಗಳನ್ನು ಆ ಸಭೆಗಳಲ್ಲಿ ಮಾಡಲಾಗಿತ್ತು. ಆರ್‌ಎಸ್‌ಎಸ್ ಇನ್ನೂ ಕೆಟ್ಟದಾಗಿ ವರ್ತಿಸಿದೆ ಮತ್ತು ಅದರ ಆಕ್ಷೇಪಾರ್ಹ ಚಟುವಟಿಕೆಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದೇವೆ’ ಎಂದು ನೆಹರೂ ತಮ್ಮ ಪತ್ರದಲ್ಲಿ ತಿಳಿಸಿದ್ದರು. ಈ ಪತ್ರದ ‘ಸ್ಕ್ರೀನ್‌ಶಾಟ್’ ಅನ್ನು ಜೈರಾಮ್ ಹಂಚಿಕೊಂಡಿದ್ದಾರೆ.
ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೆಹಲಿಯ ರಾಜ್‌ಘಾಟ್‌ನಲ್ಲಿ ಪುಷ್ಪ ನಮನ ಸಲ್ಲಿಸಿದರು
ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಜ್‌ಘಾಟ್‌ಗೆ ತೆರಳಿ ಪುಷ್ಪನಮನ ಸಲ್ಲಿಸಿದರು. ‘ಗಾಂಧಿ ಅವರು ಸ್ವದೇಶಿ ಪರಿಕಲ್ಪನೆಯ ಪ್ರಬಲ ಪ್ರತಿಪಾದಕರಾಗಿದ್ದರು. ಈಗ ಸ್ವಾವಲಂಬಿ ಭಾರತ ಮತ್ತು ದೇಶದ ಅಭಿವೃದ್ಧಿಗೆ ಸ್ವದೇಶಿ ವಿಚಾರವು ಮೂಲಭೂತ ಆಧಾರವಾಗಿದೆ’ ಎಂದು ಹೇಳಿದ್ದಾರೆ. ‘ಗಾಂಧಿ ಅವರ ವ್ಯಕ್ತಿತ್ವ ಮತ್ತು ಅವರು ನಿರ್ವಹಿಸಿದ ಜವಾಬ್ದಾರಿಗಳು ದೇಶದ ಜನರಿಗೆ ಕರ್ತವ್ಯದ ಪಥದಲ್ಲಿ ಸಾಗಲು ಸ್ಫೂರ್ತಿದಾಯಕವಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.