ನವದೆಹಲಿ: ನ್ಯಾಯಾಂಗದ ಅಡಿಪಾಯಗಳೆಂದೇ ಪರಿಗಣಿಸಲಾಗಿರುವ ಸತ್ಯ ಮತ್ತು ಸೇವೆಗಾಗಿ ಮಹಾತ್ಮ ಗಾಂಧಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನದಲ್ಲಿ ಮಾತನಾಡಿದ ಅವರು, 'ನಮ್ಮ ನ್ಯಾಯಾಂಗದ ಅಡಿಪಾಯಗಳಾಗಿ ಪರಿಗಣಿಸಿರುವ ಸತ್ಯ ಮತ್ತು ಸೇವೆಗಾಗಿ ಗೌರವಾನ್ವಿತ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅವರೊಬ್ಬ ನ್ಯಾಯವಾದಿಯಾಗಿದ್ದರು. ತಮ್ಮ ವೃತ್ತಿಯಲ್ಲಿ ಅವರು ಹೋರಾಡಿದ ಮೊದಲ ಪ್ರಕರಣದ ಬಗ್ಗೆ ತಮ್ಮ ಆತ್ಮಚರಿತ್ರೆಯಲ್ಲಿ ಬಹಳ ವಿವರವಾಗಿ ಬರೆದಿದ್ದಾರೆ' ಎಂದು ತಿಳಿಸಿದರು.
'ನಮ್ಮ ದೇಶವು ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಹೊತ್ತಿನಲ್ಲಿ ಈ ಸಮ್ಮೇಳನ ನಡೆಯುತ್ತಿರುವುದರಿಂದ ಇದು ಭಾರತಕ್ಕೆ ಒಂದು ಅತ್ಯುನ್ನತ ಕ್ಷಣವಾಗಿದೆ. ಗಾಂಧೀಜಿಯವರು ಕೈಗೆತ್ತಿಕೊಳ್ಳುವ ಪ್ರಕರಣಗಳಿಗಾಗಿ ಶುಲ್ಕ ಪಾವತಿಸಲು ಮುಂದಾಗುತ್ತಿದ್ದರೂ ಕೂಡ ಅವರು ಅದನ್ನು ನಿರಾಕರಿಸುತ್ತಿದ್ದರು. ಗಾಂಧಿಯವರು ತಾವು ಪಾಲಿಸುತ್ತಿದ್ದ ಸಂಸ್ಕೃತಿ ಮತ್ತು ಭಾರತೀಯ ತತ್ತ್ವಶಾಸ್ತ್ರದಿಂದ ಬಂದ ಸತ್ಯವನ್ನು ಎತ್ತಿಹಿಡಿಯುವ ಬಗ್ಗೆ ಸ್ಪಷ್ಟವಾಗಿದ್ದರು ಎಂದು ಮೋದಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿದ್ದ ಕೆಲ ಪ್ರಮುಖ ನ್ಯಾಯಾಂಗ ತೀರ್ಪುಗಳು ಹೊರಬಂದವು. ಈ ತೀರ್ಪುಗಳು ಬರುವುದಕ್ಕೂ ಮುನ್ನ ಇವು ಹೊತ್ತು ತರುವ ಹಲವು ಪರಿಣಾಮಗಳ ಬಗ್ಗೆ ಆತಂಕ ಎದುರಾಗಿತ್ತು. ಆದರೆ 1.3 ಶತಕೋಟಿ ಭಾರತೀಯರು ತೆರೆದ ಹೃದಯದಿಂದ ತೀರ್ಪುಗಳನ್ನು ಒಪ್ಪಿಕೊಂಡರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.