ADVERTISEMENT

ದೇಶದಲ್ಲಿ ಜನರ ಮನಸ್ಥಿತಿ ಕಾಂಗ್ರೆಸ್‌ ಪರವಾಗಿದೆ: ಸೋನಿಯಾ ಗಾಂಧಿ

ಪಿಟಿಐ
Published 31 ಜುಲೈ 2024, 13:23 IST
Last Updated 31 ಜುಲೈ 2024, 13:23 IST
<div class="paragraphs"><p>ಸೋನಿಯಾ ಗಾಂಧಿ</p></div>

ಸೋನಿಯಾ ಗಾಂಧಿ

   

ಪಿಟಿಐ ಚಿತ್ರ

ನವದೆಹಲಿ: ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲೇ ಪಕ್ಷದ ಹಿರಿಯ ನಾಯಕರ ಜತೆ ಸಭೆ ನಡೆಸಿರುವ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಜನರ ಮನಸ್ಥಿತಿ ಪಕ್ಷದ ಪರವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಆದಾಗ್ಯೂ ಅತಿಯಾದ ವಿಶ್ವಾಸ ಬೇಡ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕುಸಿತದ ನಂತರವೂ ಪಾಠ ಕಲಿಯಲಿಲ್ಲ. ಸಮುದಾಯಗಳನ್ನು ವಿಭಜಿಸುವ, ಭಯ ಅಥವಾ ದ್ವೇಷದ ವಾತಾವರಣ ಹರಡುವ ತನ್ನ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದುವರಿಸುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದರು. 

ಕನ್ವರ್‌ ಯಾತ್ರಾ ಮಾರ್ಗ ಹಾಗೂ ಆರ್‌ಎಸ್‌ಎಸ್‌ನಲ್ಲಿ ನೌಕರರು ಭಾಗವಹಿಸುವ ವಿಚಾರವನ್ನು ಪ್ರಸ್ತಾಪಿಸಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದಿಂದಾಗಿ ಯಾತ್ರೆಯ ಮಾರ್ಗಗಳಲ್ಲಿ ಅಂಗಡಿ ಮಾಲೀಕರ ಹೆಸರು ಬರೆಯುವುದಕ್ಕೆ ತಡೆ ನೀಡಿತು. ಇದರಿಂದ ಬಿಜೆಪಿಯ ಸಮುದಾಯಗಳನ್ನು ವಿಭಜಿಸುವ ಯತ್ನಕ್ಕೆ ಹಿನ್ನಡೆಯಾಯಿತು ಎಂದು ಅವರು ಲೇವಡಿ ಮಾಡಿದರು.

ಆರ್‌ಎಸ್‌ಎಸ್‌ ಅನ್ನು ಬಿಜೆಪಿ ಸಾಂಸ್ಕೃತಿಕ ಸಂಘಟನೆ ಎಂದು ಕರೆಯುತ್ತದೆ. ಆದರೆ ಇದು ಬಿಜೆಪಿಯ ರಾಜಕೀಯ ಮತ್ತು ಸೈದ್ಧಾಂತಿಕ ನೆಲೆ ಎಂದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಸೋನಿಯಾ ಗಾಂಧಿ ಆರೋಪ ಮಾಡಿದರು. 

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಉತ್ತಮ ಪ್ರದರ್ಶನ ನೀಡಿತು. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಇದನ್ನೇ ಮುದುವರಿಸಿಕೊಂಡು ಹೋಗುವಂತೆ ಅವರು ನಾಯಕರಲ್ಲಿ ಮನವಿ ಮಾಡಿದರು.

ಇಷ್ಟಕ್ಕೆ ನಾವು ತೃಪ್ತಿಪಟ್ಟುಕೊಳ್ಳಬಾರದು, ಅತಿಯಾದ ಆತ್ಮವಿಶ್ವಾಸ ಕೂಡ ಒಳ್ಳೆಯದಲ್ಲ. ಸದ್ಯ ಜನರ ಮನಸ್ಥಿತಿ ಪಕ್ಷದ ಪರವಾಗಿದೆ. ನಾವು ಜನರೊಂದಿಗೆ ಉತ್ತಮವಾಗಿ ಕೆಲಸ ಮಾಡಿದರೆ ದೇಶದ ರಾಜಕೀಯವನ್ನು ಬದಲಾಯಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 

ಇದೇ ವೇಳೆ ಕೇಂದ್ರದ ಬಜೆಟ್ ಟೀಕಿಸಿದ ಅವರು, ವಿಶೇಷವಾಗಿ ರೈತರು ಮತ್ತು ಯುವಕರ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪ ಮಾಡಿದರು. 

ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಸೇರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.