ADVERTISEMENT

ಮಹುವಾ ಪ್ರಕರಣ: ಲೋಕಪಾಲಕ್ಕೆ ಕಾಲಾವಕಾಶ ವಿಸ್ತರಣೆ

ಪಿಟಿಐ
Published 23 ಜನವರಿ 2026, 15:44 IST
Last Updated 23 ಜನವರಿ 2026, 15:44 IST
ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ   

ನವದೆಹಲಿ: ‘‍ಪ್ರಶ್ನೆಗಾಗಿ ಲಂಚ’ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡುವ ವಿಚಾರವನ್ನು ಕಾನೂನಿನ ಪ್ರಕಾರ ಪರಿಗಣಿಸಲು ಲೋಕಪಾಲಕ್ಕೆ ನೀಡಿದ್ದ ಕಾಲಾವಕಾಶವನ್ನು ದೆಹಲಿ ಹೈಕೋರ್ಟ್‌ ಎರಡು ತಿಂಗಳು ವಿಸ್ತರಿಸಿದೆ.

ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ಪೀಠವು, ಸಮಯ ವಿಸ್ತರಣೆ ಕೋರಿ ಇನ್ನು ಮುಂದೆ ಸಲ್ಲಿಸುವ ಯಾವುದೇ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ಶುಕ್ರವಾರ ಹೇಳಿತು.

ಮಹುವಾ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಪರ ವಾದ ಮಂಡಿಸಿದ ವಕೀಲರು, ‘ಕಾಲಾವಕಾಶವನ್ನು ಎರಡು ತಿಂಗಳು ವಿಸ್ತರಿಸಬೇಕೆಂಬ ಲೋಕಪಾಲದ ಮನವಿಯನ್ನು ನಾವು ವಿರೋಧಿಸುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ಅವಧಿಯನ್ನು ಎರಡು ತಿಂಗಳು ವಿಸ್ತರಿಸಲಾಗಿದೆ ಮತ್ತು ವಿಸ್ತರಣೆ ಕೋರುವ ಯಾವುದೇ ಮನವಿಯನ್ನು ಇನ್ನು ಮುಂದೆ ಪರಿಗಣಿಸಲಾಗುವುದಿಲ್ಲ’ ಎಂದು ಪೀಠ ಆದೇಶಿಸಿದೆ.

ಮಹುವಾ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಲೋಕಪಾಲ ಕಳೆದ ವರ್ಷ ನವೆಂಬರ್‌ನಲ್ಲಿ ಸಿಬಿಐಗೆ ಅನುಮತಿ ನೀಡಿತ್ತು. ಅದನ್ನು ಪ್ರಶ್ನಿಸಿದ್ದ ಸಂಸದೆ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಲೋಕಪಾಲ ನೀಡಿದ್ದ ಆದೇಶವನ್ನು 2025ರ ಡಿಸೆಂಬರ್‌ 19ರಂದು ರದ್ದುಗೊಳಿಸಿದ್ದ ಹೈಕೋರ್ಟ್, ಅನುಮತಿ ನೀಡುವ ವಿಷಯವನ್ನು ಲೋಕಪಾಲ ಕಾಯ್ದೆಯ ಸೆಕ್ಷನ್‌ 20ರ ಅಡಿಯಲ್ಲಿ ಪರಿಗಣಿಸುವಂತೆ ಸೂಚಿಸಿ, ಒಂದು ತಿಂಗಳ ಕಾಲಾವಕಾಶ ನೀಡಿತ್ತು.