ADVERTISEMENT

ಬೃಹತ್ ಲಸಿಕೆ ಅಭಿಯಾನಕ್ಕೆ ಚಾಲನೆ: ಇಲ್ಲಿವೆ ತಿಳಿಯಬೇಕಾದ ಕೆಲವು ಮಾಹಿತಿ 

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 5:53 IST
Last Updated 16 ಜನವರಿ 2021, 5:53 IST
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ: ಎಪಿ ಚಿತ್ರ
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ: ಎಪಿ ಚಿತ್ರ   

ನವದೆಹಲಿ: ಕಳೆದ 12 ತಿಂಗಳಿಂದ ದೇಶದ ಜನರನ್ನು ಕಂಗೆಡಿಸಿರುವ ಕೋವಿಡ್ ಮಹಾಮಾರಿ ತೊಡೆದುಹಾಕುವ ನಿಟ್ಟಿನಲ್ಲಿ ಬೃಹತ್ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇಂದಿನಿಂದ 3 ಕೋಟಿ ಆರೋಗ್ಯ ಮತ್ತು ಇತರ ಮುಂಚೂಣಿ ಕಾರ್ಯಕರ್ತರಿಗೆ ಮೊದಲಿಗೆಲಸಿಕೆ ಹಾಕಲಾಗುತ್ತಿದೆ. ಈ ಲಸಿಕೆ ಅಭಿಯಾನದ ಬಗ್ಗೆ ತಿಳಿಯಬೇಕಾದ ಕೆಲವು ಮಾಹಿತಿಗಳು ಇಲ್ಲಿವೆ.

1. ‘ಕೋವಿಡ್–19 ಅಂತ್ಯದ ಆರಂಭ‘ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬಣ್ಣಿಸಿರುವ ಈ ಲಸಿಕೆ ಅಭಿಯಾನದಲ್ಲಿ ಮೊದಲ ದಿನ 3 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಸ್ವೀಕರಿಸಲಿದ್ದಾರೆ.

2. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ದೇಶದಾದ್ಯಂತ 3,000 ಕಡೆಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಪ್ರತಿ ಲಸಿಕೆ ಕೇಂದ್ರದಲ್ಲಿ ಮೊದಲ ದಿನ 100 ಜನರಿಗೆ ಲಸಿಕೆ ಹಾಕಲಾಗುತ್ತದೆ.

ADVERTISEMENT

3. ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಆಕ್ಸ್‌ಫರ್ಡ್ ಯುನಿವರ್ಸಿಟಿ-ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಎರಡೂ ಲಸಿಕೆಗಳು ಸುರಕ್ಷಿತ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎಂಬುದನ್ನು ಸಾಬೀತು ಮಾಡಿವೆ ಎಂದು ಹರ್ಷವರ್ಧನ್ ಹೇಳಿದ್ದಾರೆ.

4. ಹಂತ ಹಂತವಾಗಿ ಲಸಿಕೆ ವಿತರಣೆಗೆ ಯೋಜನೆ ಮಾಡಲಾಗಿದೆ. ಆದ್ಯತೆ ಆಧಾರದ ಮೇಲೆ ಗುಂಪುಗಳನ್ನು ಗುರುತಿಸಿ ಫೋನ್ ಮೂಲಕ ಮಾಹಿತಿ ನೀಡಿ ಲಸಿಕೆ ಹಾಕಲಾಗುತ್ತದೆ. ಇದರ ಭಾಗವಾಗಿ, ಮೊದಲ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಿಸಿಕೊಳ್ಳುತ್ತಾರೆ.

5. ಸರ್ಕಾರದ ಮಾಹಿತಿ ಪ್ರಕಾರ, 1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಬಳಿಕ ಕ್ರಮವಾಗಿ 50 ವರ್ಷ ಮೇಲ್ಪಟ್ಟವರಿಗೆ, 50 ವರ್ಷ ಒಳಗಿನ ಆರೋಗ್ಯ ಸಂಬಂಧಿತ ಸಮಸ್ಯೆ ಇರುವ ನಾಗರಿಕರಿಗೆ ಲಸಿಕೆ ಹಾಕಲಾಗುತ್ತದೆ.

6. 700 ಜಿಲ್ಲೆಗಳಲ್ಲಿ ಸುಮಾರು 1.5 ಲಕ್ಷ ಸಿಬ್ಬಂದಿಗೆ ಲಸಿಕೆ ವಿತರಣೆಗೆ ವಿಶೇಷ ತರಬೇತಿ ನೀಡಲಾಗಿದೆ. ಲಸಿಕೆ ವಿತರಣೆ ವ್ಯವಸ್ಥೆ ಪರಿಶೀಲನೆಗೆ ಲಸಿಕೆ ತಾಲೀಮನ್ನು ದೇಶದಾದ್ಯಂತ ನಡೆಸಲಾಗಿದೆ.

7. ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಮುಗಿಸದ ಕೊವಾಕ್ಸಿನ್ ಲಸಿಕೆಯನ್ನು ಯಾವ ಆಧಾರದ ಮೇಲೆ ಪರಿಗಣನೆ ಮಾಡಲಾಗಿದೆ ಎಂಬ ಆರೋಗ್ಯ ತಜ್ಞರು ಮತ್ತು ಪ್ರತಿಪಕ್ಷದ ಕಳವಳವನ್ನು ನಿವಾರಿಸಲು ಸರ್ಕಾರ ಬಹುವಾಗಿ ಶ್ರಮಿಸಿದೆ.

8. 2019 ರ ಅಂತ್ಯದಲ್ಲಿ ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ಜನವರಿಯಲ್ಲಿ ಭಾರತದಲ್ಲಿ ಕಾಣಿಸಿಕೊಂಡಿತು. ಈ ಸಾಂಕ್ರಾಮಿಕ ರೋಗವು ದೇಶದಲ್ಲಿ ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. 1.05 ಕೋಟಿಗೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.