ADVERTISEMENT

25 ವರ್ಷಕ್ಕೆ ಶಾಸಕಿಯಾಗಿ ಆಯ್ಕೆಯಾದ ಮೈಥಿಲಿ ಠಾಕೂರ್: ಇವರ ಹಿನ್ನೆಲೆ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2025, 10:05 IST
Last Updated 15 ನವೆಂಬರ್ 2025, 10:05 IST
ಮೈಥಿಲಿ ಠಾಕೂರ್‌
ಮೈಥಿಲಿ ಠಾಕೂರ್‌   

ಪಟ್ನಾ: ತೀವ್ರ ಕುತೂಹಲ ಮೂಡಿಸಿದ್ದ 2025ರ ಬಿಹಾರ ವಿಧಾನಸಭೆ ಚುನಾವಣೆಗೆ ತೆರೆ ಬಿದ್ದಿದೆ. ಆದರೆ ಚುನಾವಣೆಯಲ್ಲಿ 25 ವರ್ಷದ ಜಾನಪದ ಕಲಾವಿದೆ ಮೈಥಿಲಿ ಠಾಕೂರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 74 ಸಾವಿರಕ್ಕೂ ಅಧಿಕ ಮತ ಪಡೆದು ಗೆಲುವು ಸಾಧಿಸಿದ್ದಾರೆ.

ನವೆಂಬರ್ 14ರಂದು ನಡೆದ ಮತ ಎಣಿಕೆಯಲ್ಲಿ ಮೈಥಿಲಿ ಠಾಕೂರ್ ಅವರು ‌ಆರ್‌ಜೆಡಿಯ ಹಿರಿಯ ನಾಯಕ ಬಿನೋದ್ ಮಿಶ್ರಾ ಅವರನ್ನು 12 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದರು. 

ಮಧುಬನಿ ಜಿಲ್ಲೆಯ ಬೇಣಿಪಟ್ಟಿಯಲ್ಲಿ ಜನಿಸಿದ್ದ ಮೈಥಿಲಿ ಠಾಕೂರ್ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ. ಇವರು ಅಕ್ಟೋಬರ್‌ನಲ್ಲಿ ಬಿಜೆಪಿಗೆ ಸೇರಿದ್ದರು.

ADVERTISEMENT

ಮೈಥಿಲಿ ಠಾಕೂರ್ ಅವರು ಅಲಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ. ಆ ಮೂಲಕ ಈ ಕ್ಷೇತ್ರದಲ್ಲಿ ಬಿಜೆಪಿ ಮೊದಲ ಬಾರಿಗೆ ಗೆಲುವು ಸಾಧಿಸಿದಂತಾಯಿತು.

ಜಾನಪದ ಗಾಯಕಿಯಾಗಿರುವ ಮೈಥಿಲಿ ಠಾಕೂರ್ 2000ನೇ ಇಸವಿಯ ಜುಲೈ 25ರಂದು ಮಧುಬನಿಯಲ್ಲಿ ಜನಿಸಿದರು. ಅವರ ಕುಟುಂಬವು ದೆಹಲಿಯ ನಜಾಫ್‌ಗಢಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರ ತಂದೆ ಕೆಲಸ ಕಳೆದುಕೊಂಡ ಕಾರಣ ಅವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದರು.

ಬಿಹಾರದ ಅತ್ಯಂತ ಕಿರಿಯ ಶಾಸಕಿ

25ನೇ ವಯಸ್ಸಿನಲ್ಲಿ ಶಾಸಕರಾಗಿರುವ ಮೈಥಿಲಿ ಠಾಕೂರ್ ಬಿಹಾರ ರಾಜ್ಯದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

ಸಾಂಪ್ರದಾಯಿಕವಾಗಿ ಅಲಿನಗರ ಆರ್‌ಜೆಡಿಯ ಭದ್ರಕೋಟೆಯಾಗಿತ್ತು. ಅಬ್ದುಲ್ ಬಾರಿ ಸಿದ್ದಿಕಿ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು  2015 ರ ಚುನಾವಣೆಯ ಬಳಿಕ ಅವರು ರಾಜಕೀಯದಿಂದ ದೂರ ಸರಿದಿದ್ದರು.

ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಸಂಗೀತವೆರಡರಲ್ಲೂ ಹೆಸರು ಮಾಡಿರುವ ಮೈಥಿಲಿ ಸರಿಗಮಪ ಲಿಟಲ್ ಚಾಂಪ್ಸ್ ಮತ್ತು ಇಂಡಿಯನ್ ಐಡಲ್ ಜೂನಿಯರ್‌ನಂತಹ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾದರು. 2021ರಲ್ಲಿ ಮೈಥಿಲಿಗೆ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.