ADVERTISEMENT

ಉಗ್ರರ ವಿರುದ್ಧ ಕಾರ್ಯಾಚರಣೆ: ಕರ್ನಾಟಕ ಮೂಲದ ಕ್ಯಾಪ್ಟನ್‌ ಸೇರಿ ನಾಲ್ವರು ಹುತಾತ್ಮ

ಪಿಟಿಐ
Published 22 ನವೆಂಬರ್ 2023, 14:52 IST
Last Updated 22 ನವೆಂಬರ್ 2023, 14:52 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಸೇನೆಯ ಇಬ್ಬರು ಕ್ಯಾಪ್ಟನ್‌ಗಳು, ಹವಾಲ್ದಾರ್ ಮತ್ತು ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಸೇನೆಯ ಮೇಜರ್‌ ಹಾಗೂ ಮತ್ತೊಬ್ಬ ಯೋಧ ಗಾಯಗೊಂಡಿದ್ದು ಅವರನ್ನು ಉಧಂಪುರದ ಸೇನಾ ಕಮಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುತಾತ್ಮರಾದವರ ಪೈಕಿ, 63–ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್‌ ಎಂ.ವಿ.ಪ್ರಾಂಜಲ್‌ ಅವರು ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್‌ನ (ಎಂಆರ್‌ಪಿಎಲ್‌) ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಅವರ ಪುತ್ರ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಪ್ರಾಂಜಲ್‌, ಎಂಆರ್‌ಪಿಎಲ್‌ನ ದೆಹಲಿ ಪಬ್ಲಿಕ್‌ ಸ್ಕೂಲ್‌ ಹಳೆ ವಿದ್ಯಾರ್ಥಿಯಾಗಿದ್ದರು ಎಂದೂ ತಿಳಿಸಿವೆ.

ADVERTISEMENT

ಬಾಜಿಮಾಲ್‌ನ ಅರಣ್ಯ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನೆ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಅಲ್ಲಿ ಅವಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಭಾರಿ ಶಸ್ತ್ರಾಸ್ತ್ರ ಹೊಂದಿರುವ ಇಬ್ಬರು ಉಗ್ರರು ಅರಣ್ಯದಲ್ಲಿ ಅವಿತಿರುವ ಸಾಧ್ಯತೆ ಇದ್ದು, ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

‘ಗುಪ್ತಚರ ಇಲಾಖೆಯ ಮಾಹಿತಿ ಅನ್ವಯ ಗುಲಬರ್ಗ್‌ ಅರಣ್ಯ ಪ್ರದೇಶದ ಕಾಲಕೋಟ್‌ನಲ್ಲಿ ಭಾನುವಾರದಿಂದಲೇ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು’ ಎಂದು ಸೇನೆಯು ‘ಎಕ್ಸ್‌’ ವೇದಿಕೆಯಲ್ಲಿ ತಿಳಿಸಿದೆ.

ಅರಣ್ಯದಲ್ಲಿ ಅವಿತುಕೊಂಡಿರುವ ಭಯೋತ್ಪಾದಕರೂ ಗಾಯಗೊಂಡಿದ್ದಾರೆ. ಈ ಪ್ರದೇಶವನ್ನು ಭದ್ರತಾಪಡೆ ಸುತ್ತು ವರಿದಿದೆ. ಎನ್‌ಕೌಂಟರ್‌ ನಡೆದ ಪ್ರದೇಶದಲ್ಲಿರುವ ಇಬ್ಬರು ಉಗ್ರರು ವಿದೇಶಿಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.