ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: 'ನಿಮಗೆ ಅನುಕೂಲವಾಗುವ ಭಾಷೆಯಲ್ಲೇ ಮಾತನಾಡಿ. ಆದರೆ, ನಿಮ್ಮ ಅಭಿಪ್ರಾಯಗಳನ್ನು ಬಲವಾಗಿ ಮಂಡಿಸಿ'
– ಇದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಸಂಸದರಿಗೆ ನೀಡಿದ ಸಂದೇಶ.
ಲೋಕಸಭೆಯಲ್ಲಿ ನಡೆದ ಕಾಂಗ್ರೆಸ್ ಸಂಸದರ ಸಭೆಯಲ್ಲಿ ಮಾತನಾಡಿರುವ ರಾಹುಲ್, ಬಜೆಟ್ ಅಧಿವೇಶನದ ಮೊದಲ ಹಂತವು ಅಲ್ಪಾವಧಿಯಲ್ಲಿ ಮುಗಿದಿದೆ. ಎರಡನೇ ಹಂತವು ಮಾರ್ಚ್ 10ರಿಂದ ಆರಂಭವಾಗಲಿದ್ದು, ಈ ಅವಧಿಯಲ್ಲಿ ಸಂಸದರು ಸದನದಲ್ಲಿ ಹಾಜರಿರುವುದರ ಮೇಲೆ ನಿಗಾ ಇಡಲಾಗುವುದು ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್, ಮಾಣಿಕ್ಕಂ ಟ್ಯಾಗೋರ್, ಗೌರವ್ ಗೊಗೋಯ್ ಹಾಗೂ ಕೋಡಿಕ್ಕುನ್ನಿಲ್ ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಜೆಟ್ ಅಧಿವೇಶನದ ಎರಡನೇ ಹಂತದ ವೇಳೆ ಹೆಚ್ಚಿನ ಸಂಸದರಿಗೆ ಮಾತನಾಡಲು ಅವಕಾಶ ಸಿಗಲಿದೆ ಎಂದು ಹೇಳಿರುವ ರಾಹುಲ್, ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ಹಾಗೂ ಬಜೆಟ್ ಕುರಿತ ಚರ್ಚೆಯಲ್ಲಿ 27 ಸಂಸದರು ಭಾಗವಹಿಸಿದ್ದರು ಎಂದಿದ್ದಾರೆ.
ಬಿಮಲ್ ಅಕೋಯಿಜಮ್, ವರುಣ್ ಚೌಧರಿ, ಉಜ್ವಲ್ ರಮಣ್ ಸಿಂಗ್ ಮತ್ತು ಮನೀಶ್ ತಿವಾರಿ ಅವರು ಅಧಿವೇಶನದ ಮೊದಲ ಅವಧಿಯಲ್ಲಿ ಮಾತನಾಡಿದ್ದನ್ನು ವಿಶೇಷವಾಗಿ ಉಲ್ಲೇಖಿಸಿ, ಸದನದಲ್ಲಿ ಧ್ವನಿ ಎತ್ತಲು ಎಲ್ಲ ಸಂಸದರು ಸಿದ್ಧರಿರಬೇಕು ಎಂದು ಸೂಚಿಸಿದ್ದಾರೆ.
ಸಂಸದರು ಇಂಗ್ಲಿಷ್ ಅಥವಾ ಹಿಂದಿಯಲ್ಲೇ ಮಾತನಾಡಬೇಕು ಎಂಬುದೇನೂ ಇಲ್ಲ. ತಮಗೆ ಅನುಕೂಲಕರವಾದ ಯಾವುದೇ ಭಾಷೆಯಲ್ಲಿ ಮಾತನಾಡಬಹುದು. ಆದರೆ, ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಚಳಿಗಾಲದ ಅಧಿವೇಶನದ ಎರಡನೇ ದಿನ ಸಂವಿಧಾನದ ಕುರಿತ ಚರ್ಚೆಗೆ ಗೈರಾದ ಎಲ್ಲ ಸಂಸದರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಪಕ್ಷದ ಸಂಸದೀಯ ವ್ಯವಸ್ಥಾಪಕರಿಗೆ ರಾಹುಲ್ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಜೆಟ್ ಅಧಿವೇಶನದ ಎರಡನೇ ಹಂತವು ಮಾರ್ಚ್ 10ರಿಂದ ಪ್ರಾರಂಭವಾಗಿ ಏಪ್ರಿಲ್ 4ರ ವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.