ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಮಿತ್ರ ಪಕ್ಷವಾದ ಮಕ್ಕಳ್ ನೀಧಿ ಮಯ್ಯಂ(ಎಂಎನ್‌ಎಂ), ಜೂನ್ 19ರಂದು ನಡೆಯಲಿರುವ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ಪಕ್ಷದ ಸಂಸ್ಥಾಪಕ, ಅಧ್ಯಕ್ಷ ಕಮಲ್ ಹಾಸನ್ ಅವರನ್ನು ಅಭ್ಯರ್ಥಿಯಾಗಿ ಬುಧವಾರ ಘೋಷಿಸಿದೆ.
ಎಂಎನ್‌ಎಂನ ಆಡಳಿತ ಮಂಡಳಿ ಮತ್ತು ಆಡಳಿತ ಸಮಿತಿಯು ಸಭೆ ನಡೆಸಿ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರನ್ನು ಮೇಲ್ಮನೆಗೆ ತನ್ನ ಅಭ್ಯರ್ಥಿಯಾಗಿ ಹೆಸರಿಸುವ ನಿರ್ಣಯವನ್ನು ಅಂಗೀಕರಿಸಿದ್ದು, ಮಿತ್ರಪಕ್ಷಗಳಿಂದ ಔಪಚಾರಿಕವಾಗಿ ಬೆಂಬಲವನ್ನು ಕೋರಿದೆ.
2024ರ ಲೋಕಸಭಾ ಚುನಾವಣೆಗೆ ಮೊದಲು ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ನಟ-ರಾಜಕಾರಣಿ ಕಮಲ್ ಹಾಸನ್ ನೇತೃತ್ವದ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡದ್ದರು. ಇಂದು ನಡೆದ ಸೀಟು ಹಂಚಿಕೆ ವೇಳೆ ಡಿಎಂಕೆ, ಒಂದು ಸ್ಥಾನವನ್ನು ಕಮಲ್ ಹಾಸನ್ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು. ಡಿಎಂಕೆ ಘೋಷಣೆ ಬೆನ್ನಲ್ಲೇ ಎಂಎನ್‌ಎಂ ಪಕ್ಷದ ಅಭ್ಯರ್ಥಿಯನ್ನು ಘೋಷಿಸಲಾಗಿದೆ.
ರಾಜ್ಯಸಭೆಯ 6 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಡಿಎಂಕೆ 4 ರಲ್ಲಿ ಸ್ಪರ್ಧಿಸಲಿದೆ.
ಡಿಎಂಕೆಯಿಂದ ಮೇಲ್ಮನೆಯ ಹಾಲಿ ಸದಸ್ಯ ಹಿರಿಯ ವಕೀಲ ಪಿ ವಿಲ್ಸನ್; ಪಕ್ಷದ ಸೇಲಂ ಮೂಲದ ನಾಯಕ ಎಸ್.ಆರ್. ಶಿವಲಿಂಗಂ ಮತ್ತು ಕವಿ, ಬರಹಗಾರ ರುಕಯ್ಯ ಮಲಿಕ್ ಅಲಿಯಾಸ್ ಕವಿಗ್ನರ್ ಸಲ್ಮಾ ಅವರನ್ನು ಹೆಸರಿಸಿತು.ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
2025ರ ಜುಲೈ 24ಕ್ಕೆ ತಮಿಳುನಾಡಿನ ಆರು ರಾಜ್ಯಸಭಾ ಸದಸ್ಯರ ಅವಧಿ ಅಂತ್ಯವಾಗಲಿದೆ. ಇದರಲ್ಲಿ ಪಿಎಂಕೆಯ ಅನ್ಬುಮಣಿ ರಾಮದಾಸ್ ಮತ್ತು ಎಂಡಿಎಂಕೆ ನಾಯಕ ವೈಕೊ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.