ADVERTISEMENT

ಮಲೇಷ್ಯಾ ವೈರಸ್ ಭಯ ಬಿಡಿ: ವಿಜ್ಞಾನಿಗಳ ಅಭಯ

ಪಿಟಿಐ
Published 20 ಆಗಸ್ಟ್ 2020, 16:22 IST
Last Updated 20 ಆಗಸ್ಟ್ 2020, 16:22 IST

ನವದೆಹಲಿ: ಮಲೇಷ್ಯಾದಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ನ ರೂಪಾಂತರ ತಳಿಯು ಕೊರೊನಾಕ್ಕೆ ಹೋಲಿಸಿದರೆ 10 ಪಟ್ಟು ಹೆಚ್ಚು ಸಾಂಕ್ರಾಮಿಕ ಎಂದು ವರದಿಯಾಗಿದ್ದರೂ, ಭಾರತಕ್ಕೆ ಅದರಿಂದ ಯಾವುದೇ ಅಪಾಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭಾರತದಿಂದ ಮಲೇಷ್ಯಾಕ್ಕೆ ವಾಪಸಾಗಿದ್ದ ರೆಸ್ಟೋರೆಂಟ್ ಮಾಲೀಕನಲ್ಲಿ ಡಿ614ಜಿ ಹೆಸರಿನ ವೈರಾಣು ಕಂಡುಬಂದಿದೆ ಎಂದು ಮಲೇಷ್ಯಾದ ಆರೋಗ್ಯ ಇಲಾಖೆ ನಿರ್ದೇಶಕರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು.

‘10 ಪಟ್ಟು ಅಪಾಯಕಾರಿ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಸೂಪರ್ ವೇಗದಲ್ಲಿ ಹರಡುತ್ತದೆ ಎಂಬುದು ಆರೋಗ್ಯ ಇಲಾಖೆ ನಿರ್ದೇಶಕರ ಬೀಸು ಹೇಳಿಕೆ ಮಾತ್ರ’ ಎಂದಿರುವ ಭಾರತದ ವಿಜ್ಞಾನಿಗಳು ಯಾವುದೇ ಚಿಂತೆಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ADVERTISEMENT

‘ರೂಪಾಂತರ ತಳಿಯು ಮಲೇಷ್ಯಾದಲ್ಲಿ ಈಗ ವರದಿಯಾಗಿರಬಹುದು. ಆದರೆ ಅದು ಜಗತ್ತಿಗೆ ಹೊಸದಲ್ಲ’ ಎಂದು ವೈರಾಣುಶಾಸ್ತ್ರಜ್ಞೆ ಉಪಾಸನಾ ರಾಯ್ ಹೇಳಿದ್ದಾರೆ. ‘ವೈರಾಣು ರೂಪಾಂತರದ ಬಗ್ಗೆ ಏಪ್ರಿಲ್‌ನಲ್ಲೇ ತಿಳಿದಿತ್ತು. ಅದು ಜಗತ್ತಿನ ಹಲವು ದೇಶಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಇದು ಹೊಸ ರೂಪಾಂತರ ಅಲ್ಲ. ಬಹುಶಃ ಇದು ಮಲೇಷ್ಯಾಕ್ಕೆ ಹೊಸದಿರಬಹುದು’ ಎಂದು ಅವರು ಅಭಿಪ್ರಾಯಟ್ಟಿದ್ದಾರೆ.

ರೂಪಾಂತರ ಹೊಂದಿದ ವೈರಸ್‌ ಹೆಚ್ಚು ಸಾಂಕ್ರಾಮಿಕವಾಗುವ ಸಾಮರ್ಥ್ಯ ಪಡೆದಿರುತ್ತದೆ ಎಂಬ ಮಾತಿದ್ದರೂ, ಅದು ರುಜುವಾತು ಆಗಿಲ್ಲ. ಹೀಗಿದ್ದಾಗ ಅದು ಹೆಚ್ಚು ಅಪಾಯಕಾರಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ವೈರಾಣುವಿನ ಅಸ್ತಿತ್ವ ಭಾರತದಲ್ಲಿ ಈಗಾಗಲೇ ಇದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕ ಕುಮಾರ್ ಸೋಮಸುಂದರಂ ಹೇಳಿದ್ದಾರೆ. ‘ಜಿ ಕ್ಲಾಡ್’ ಹೆಸರಿನಿಂದಲೂ ಕರೆಯುವ ಇದು ಭಾರತದ 70–75 ಕೋವಿಡ್ ಪ್ರಕರಣಗಳಲ್ಲಿ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ.

ಸೋಮಸುಂದರಂ ಅವರ ತಂಡವು ಜೂನ್‌ನಲ್ಲಿ ನೂರಾರು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿ ‘ಕರೆಂಟ್ ಸೈನ್ಸ್’ ನಿಯತಕಾಲಿಕದಲ್ಲಿ ಈ ಕುರಿತ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.