ಪ್ರಜ್ಞಾ ಸಿಂಗ್
ಪಿಟಿಐ ಚಿತ್ರ
ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ 7 ಆರೋಪಿಗಳನ್ನು ಖುಲಾಸೆಗೊಳಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಈ ಕುರಿತು ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಸಾಧ್ವಿ ಪ್ರಜ್ಞಾ ಸಿಂಗ್, ‘ತನಿಖೆಗೆ ಕರೆಸಿಕೊಳ್ಳುವವರಿಗೆ ಅದರ ಹಿಂದೆ ಒಂದು ಆಧಾರವಿರಬೇಕು ಎಂದು ನಾನು ಆರಂಭದಿಂದಲೇ ಹೇಳುತ್ತಿದ್ದೆ. ತನಿಖೆಗೆ ಕರೆಸಿದಾಗ ಅವರು ನನ್ನನ್ನು ಬಂಧಿಸಿ ಚಿತ್ರಹಿಂಸೆ ನೀಡಿದರು. ಇದು ನನ್ನ ಇಡೀ ಬದುಕನ್ನೇ ನಾಶಪಡಿಸಿತು. ನಾನು ಸನ್ಯಾಸ ಜೀವನವನ್ನು ನಡೆಸುತ್ತಿದ್ದೇನೆ. ಆದರೆ ನನ್ನನ್ನು ಆರೋಪಿಯನ್ನಾಗಿ ಮಾಡಿದರು. ಯಾವೊಬ್ಬರು ನನ್ನ ಪರವಾಗಿ ಬೆನ್ನಿಗೆ ನಿಲ್ಲಲಿಲ್ಲ. ಸನ್ಯಾಸಿಯಾಗಿರುವುದಕ್ಕೆ ಇನ್ನೂ ಬದುಕಿದ್ದೇನೆ. ಸಂಚು ರೂಪಿಸಿ ಭಗವಾಗೆ ಅವಮಾನ ಮಾಡಿದರು. ಇಂದು ಭಗವಾ ಗೆದ್ದಿದೆ, ಹಿಂದುತ್ವ ಜಯ ಸಾಧಿಸಿದೆ. ಅಪರಾಧಿಗಳಿಗೆ ದೇವರು ಶಿಕ್ಷೆ ಕೊಡುತ್ತಾರೆ. ಭಾರತ ಮತ್ತು ಭಗವಾವನ್ನು ಅವಹೇಳನ ಮಾಡಿದವರಿಗೆ ತಪ್ಪನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ’ ಎಂದರು.
ಎನ್‌ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಿಗೆ ಧನ್ಯವಾದ ಹೇಳಿದ ‘ಲೆ.ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ‘ನನ್ನ ಮತ್ತು ನನ್ನ ಸಂಸ್ಥಗಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ. ಯಾವ ಸಂಸ್ಥೆಯನ್ನೂ ಈ ವಿಚಾರದಲ್ಲಿ ದೂರುವುದಿಲ್ಲ. ತನಿಖಾ ಸಂಸ್ಥೆಗಳದ್ದೂ ತಪ್ಪಿಲ್ಲ, ಆದರೆ ಅಲ್ಲಿರುವ ಜನರು ತಪ್ಪು ಮಾಡಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿ ಸಾಮಾನ್ಯ ಮನುಷ್ಯನ ನಂಬಿಕೆಯನ್ನು ಜೀವಂತವಾಗಿರಿಸಿದ್ದಕ್ಕೆ ಧನ್ಯವಾದ’ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.