ADVERTISEMENT

Malegaon Blast Verdict | ಐವರು ನ್ಯಾಯಾಧೀಶರು...ಸುದೀರ್ಘ ವಿಚಾರಣೆ

ಪಿಟಿಐ
Published 1 ಆಗಸ್ಟ್ 2025, 0:30 IST
Last Updated 1 ಆಗಸ್ಟ್ 2025, 0:30 IST
   

ಮುಂಬೈ: 2008ರಲ್ಲಿ ಮಾಲೇಗಾಂವ್‌ನಲ್ಲಿ ಬಾಂಬ್‌ ಸ್ಫೋಟಗೊಂಡ ಪ್ರಕರಣದ ವಿಚಾರಣೆ ಸುದೀರ್ಘ 17 ವರ್ಷ ನಡೆದಿದೆ. ಪ್ರಕರಣದ ವಿಚಾರಣೆಯ ವಿವಿಧ ಹಂತಗಳಲ್ಲಿ ಐವರು ನ್ಯಾಯಾಧೀಶರು ಕಲಾಪಗಳನ್ನು ನಡೆಸಿದ್ದಾರೆ. ಅದರೆ, ಒಂದು ಬಾರಿ ಮಾತ್ರ ತನಿಖಾ ಸಂಸ್ಥೆಯನ್ನು ಬದಲಾಯಿಸಲಾಗಿತ್ತು.

ಆರೋಪಿಗಳ ಬಂಧನ, ಆರೋಪ ನಿಗದಿ, ಆರೋಪಪಟ್ಟಿ ಸಲ್ಲಿಕೆ ಹಾಗೂ ವಿಚಾರಣೆ ಆರಂಭ ಒಂದೆಡೆಯಾದರೆ, 2008ರಿಂದ 2025ರ ನಡುವೆ ಐವರು ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದರು. ಇದು, ವಿಚಾರಣೆ ವಿಳಂಬವಾಗಲು ಕಾರಣ ಎಂದು ಪ್ರಕರಣದ ಸಂತ್ರಸ್ತರು ಹಾಗೂ ಆರೋಪಿಗಳ ಅಭಿಪ್ರಾಯವಾಗಿದೆ.

‘ವಿಚಾರಣೆ ತ್ವರಿತವಾಗಿಸುವಲ್ಲಿ ಪ್ರಾಸಿಕ್ಯೂಷನ್ ಹಾಗೂ ಪ್ರತಿವಾದಿಗಳ ಪರ ವಕೀಲರ ವೈಫಲ್ಯವಿದೆ’ ಎಂದು ಆರೋಪಿಗಳಲ್ಲೊಬ್ಬರಾದ ಸಮೀರ್‌ ಕುಲಕರ್ಣಿ ಹೇಳಿದ್ದಾರೆ. ವಿಚಾರಣೆಯನ್ನು ತ್ವರಿತಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಕುಲಕರ್ಣಿ ಅವರು ಹೈಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದ್ದರು.

ADVERTISEMENT

‘ನ್ಯಾಯಾಧೀಶರನ್ನು ಪದೇ ಪದೇ ಬದಲಾಯಿಸಿದ್ದು ವಿಚಾರಣೆ ತ್ವರಿತಗೊಳ್ಳುವುದಕ್ಕೆ ಅಡ್ಡಿಯಾಗಿತ್ತು. ಬೃಹತ್‌ ಪ್ರಮಾಣದ ದಾಖಲೆಗಳನ್ನು ಹೊಸ ನ್ಯಾಯಾಧೀಶರು ಅವಲೋಕಿಸಿಬೇಕಿತ್ತು. ವಿಳಂಬವಾಗಲು ಇದು ಕೂಡ ಒಂದು ಕಾರಣ’ ಎಂದು ಕೆಲ ಸಂತ್ರಸ್ತರ ಪರ ವಾದಿಸಿದ್ದ ವಕೀಲ ಶಹೀದ್‌ ನದೀಮ್ ಹೇಳುತ್ತಾರೆ.

ವಿಶೇಷ ನ್ಯಾಯಾಧೀಶ ವೈ.ಡಿ.ಶಿಂದೆ ಮೊದಲು ವಿಚಾರಣೆ ಆರಂಭಿಸಿದ್ದರು. ನಂತರದ ದಿನಗಳಲ್ಲಿ ವಿಶೇಷ ನ್ಯಾಯಾಧೀಶರಾದ ಎಸ್‌.ಡಿ.ಟೆಕಾಲೆ, ವಿ.ಎಸ್‌.ಪಡಲ್ಕರ್, ನ್ಯಾಯಾಧೀಶ ಪಿ.ಆರ್‌.ಸಿಟ್ರೆ ವಿಚಾರಣೆ ನಡೆಸಿದರು. ಕೊನೆಗೆ, ವಿಶೇಷ ನ್ಯಾಯಾಧೀಶ ಎ.ಕೆ.ಲಾಹೋಟಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.