ADVERTISEMENT

ಮಾಲೇಂಗಾವ್ ಸ್ಫೋಟ ಪ್ರಕರಣ: ಪುರೋಹಿತ್, ಸಾಧ್ವಿ ವಿರುದ್ಧ ದೋಷಾರೋಪ

ಪಿಟಿಐ
Published 30 ಅಕ್ಟೋಬರ್ 2018, 19:22 IST
Last Updated 30 ಅಕ್ಟೋಬರ್ 2018, 19:22 IST
   

ಮುಂಬೈ: ಮಾಲೇಂಗಾವ್ ಸ್ಫೋಟ ಪ್ರಕರಣದಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ ಐವರ ವಿರುದ್ಧ ಭಯೋತ್ಪಾದನಾ ಚಟುವಟಿಕೆ, ಕ್ರಿಮಿನಲ್ ಸಂಚು ಮತ್ತು ಹತ್ಯೆ ಆರೋಪ ಹೊರಿಸಲಾಗಿದೆ.

ಆರೋಪಿಗಳ ವಿರುದ್ಧ ಎನ್‌ಐಎ ವಿಶೇಷ ಕೋರ್ಟ್‌ ನ್ಯಾಯಾಧೀಶ ವಿನೋದ್ ಪಡಲ್ಕರ್ ಅವರುಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ದೋಷಾರೋಪ ನಿಗದಿಪಡಿಸಿದರು. ನವೆಂಬರ್ 2ರಿಂದ ವಿಚಾರಣೆ ಆರಂಭವಾಗಲಿದೆ.

ಯುಎಪಿಎ ಕಾಯ್ದೆಯಡಿ ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾದ ಆರೋಪ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿ ಕ್ರಿಮಿನಲ್ ಸಂಚು ಮತ್ತು ಹತ್ಯೆ ಆರೋಪವನ್ನು ಆಪಾದಿತರ ಮೇಲೆ ಹೊರಿಸಲಾಗಿದೆ. ಒಂದು ವೇಳೆ ಆರೋಪಗಳು ಸಾಬೀತಾದರೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

ADVERTISEMENT

ನ್ಯಾಯಾಧೀಶರು ಆರೋಪಗಳನ್ನು ಓದಿ ಹೇಳುವಾಗ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ತಾವು ನಿರಪರಾಧಿಗಳು ಎಂದುಅವರೆಲ್ಲರೂ ಪುನರುಚ್ಚರಿಸಿದರು.

ಪುರೋಹಿತ್, ಸಾಧ್ವಿ ಮಾತ್ರವಲ್ಲದೇ, ಆರೋಪಿಗಳಾದ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ವಿರುದ್ಧವೂ ಆರೋಪ ನಿಗದಿಯಾಗಿದೆ.

2008ರ ಸೆಪ್ಟೆಂಬರ್ 29ರಲ್ಲಿ ಮಾಲೇಂಗಾವ್ ಪಟ್ಟಣದಲ್ಲಿ ಅವಳಿ ಸ್ಫೋಟ ಸಂಭವಿಸಿ ಆರು ಮಂದಿ ಮೃತಪಟ್ಟು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.