ADVERTISEMENT

ಮಾನವಹಕ್ಕು ಆಯೋಗದ ಅಧ್ಯಕ್ಷ, ಸದಸ್ಯರ ಆಯ್ಕೆಯಲ್ಲಿ ಭಾಗವಹಿಸಲ್ಲ: ಖರ್ಗೆ

ಪಿಟಿಐ
Published 2 ಜೂನ್ 2021, 3:38 IST
Last Updated 2 ಜೂನ್ 2021, 3:38 IST
ಮಲ್ಲಿಕಾರ್ಜುನ ಖರ್ಗೆ (ಪಿಟಿಐ ಚಿತ್ರ)
ಮಲ್ಲಿಕಾರ್ಜುನ ಖರ್ಗೆ (ಪಿಟಿಐ ಚಿತ್ರ)   

ನವದೆಹಲಿ: ರಾಷ್ಟ್ರೀಯ ಮಾನವಹಕ್ಕು ಆಯೋಗದ ಅಧ್ಯಕ್ಷರ (ಎನ್‌ಎಚ್‌ಆರ್‌ಸಿ) ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆಯಿಂದ ದೂರ ಉಳಿಯುವುದಾಗಿ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಕುರಿತು ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿ ಅವರ ನಿವಾಸದಲ್ಲಿ ಮಂಗಳವಾರ ಸಂಜೆ ನಡೆದ ನೇಮಕಾತಿ ಸಮಿತಿ ಸಭೆಯಲ್ಲಿ, ಎನ್‌ಎಚ್‌ಆರ್‌ಸಿ ಅಧ್ಯಕ್ಷರ ಆಯ್ಕೆ ವಿಷಯಕ್ಕೆ ಸಂಬಂಧಿಸಿ ಖರ್ಗೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ನನ್ನ ಕಳವಳವನ್ನು ಸಭೆಯಲ್ಲಿ ಪುನರುಚ್ಚರಿಸಿದ್ದೇನೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ಒಬ್ಬ ವ್ಯಕ್ತಿಯನ್ನಾದರೂ ಸೆಕ್ಷನ್ 3(2)(ಎ) ಅಡಿಯಲ್ಲಿ ಅಧ್ಯಕ್ಷರ ಹುದ್ದೆಗೆ ಮತ್ತು ಸದಸ್ಯರ ಹುದ್ದೆಗೆ ಸೆಕ್ಷನ್ 3(2)(ಸಿ) ಅಥವಾ ಸೆಕ್ಷನ್ 3(2)(ಡಿ) ಅಡಿಯಲ್ಲಿ ನೇಮಕ ಮಾಡಲು ಶಿಫಾರಸು ಮಾಡಬೇಕೆಂದು ಪ್ರಸ್ತಾಪಿಸಿದ್ದೇನೆ. ಈ ವಿಚಾರವನ್ನು, 1993ರ ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ ಮತ್ತು ಅದರ ತಿದ್ದುಪಡಿಗಳಲ್ಲಿ ಉಲ್ಲೇಖವಾಗಿಲ್ಲ ಎಂಬ ಒಂದೇ ಕಾರಣಕ್ಕೆ ನಿರ್ಲಕ್ಷಿಸಬಾರದು ಎಂದೂ ಗಮನ ಸೆಳೆದಿದ್ದೇನೆ’ ಎಂದು ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.

‘ಇದು ಕಾರ್ಯಸಾಧ್ಯವಾಗದಿದ್ದರೆ, ಸಭೆಯನ್ನು ಒಂದು ವಾರ ಮುಂದೂಡಬಹುದು ಅಥವಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಕೆಲವು ಅಭ್ಯರ್ಥಿಗಳ ಹೆಸರನ್ನು ಆಯ್ಕೆ ಸಮಿತಿಯ ಮುಂದಿಡುವುದನ್ನು ಮರುಪರಿಶೀಲಿಸಬಹುದು’ ಎಂದೂ ಖರ್ಗೆ ಉಲ್ಲೇಖಿಸಿದ್ದಾರೆ.

‘ನನ್ನ ಯಾವುದೇ ಪ್ರಸ್ತಾಪಗಳನ್ನು ಸ್ವೀಕರಿಸದ ಕಾರಣ, ಎನ್‌ಎಚ್‌ಆರ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಸಮಿತಿಯು ಮಾಡಿದ ಶಿಫಾರಸುಗಳ ಬಗ್ಗೆ ನನ್ನ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ’ ಎಂದೂ ಖರ್ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.