ADVERTISEMENT

ಆಕ್ಷೇಪಾರ್ಹ ಪದ ಬಳಕೆ: ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಿದ ಜೆ.ಪಿ.ನಡ್ಡಾ

ಪಿಟಿಐ
Published 29 ಜುಲೈ 2025, 15:30 IST
Last Updated 29 ಜುಲೈ 2025, 15:30 IST
<div class="paragraphs"><p>ಜೆ.ಪಿ.ನಡ್ಡಾ, ಮಲ್ಲಿಕಾರ್ಜುನ ಖರ್ಗೆ</p></div>

ಜೆ.ಪಿ.ನಡ್ಡಾ, ಮಲ್ಲಿಕಾರ್ಜುನ ಖರ್ಗೆ

   

ಪಿಟಿಐ

ನವದೆಹಲಿ: ‘ಆಪರೇಷನ್‌ ಸಿಂಧೂರ’ ಚರ್ಚೆ ವೇಳೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಕ್ಕಾಗಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಜೆ.ಪಿ.ನಡ್ಡಾ ಅವರು ಕ್ಷಮೆಯಾಚಿಸಿದ್ದಾರೆ.

ADVERTISEMENT

‘ನಾನು ನನ್ನ ಮಾತುಗಳನ್ನು ಹಿಂದಕ್ಕೆ ಪಡೆದುಕೊಂಡಿದ್ದೇನೆ. ನಿಮ್ಮ(ಮಲ್ಲಿಕಾರ್ಜುನ ಖರ್ಗೆ) ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ನಡ್ಡಾ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ‘ಆಪರೇಷನ್‌ ಸಿಂಧೂರ’ ಕುರಿತು ನಡೆಯುತ್ತಿರುವ ವಿಶೇಷ ಚರ್ಚೆ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ನಡ್ಡಾ, ಮಲ್ಲಿಕಾರ್ಜುನ ಖರ್ಗೆ ತಮ್ಮ ‘ಮಾನಸಿಕ ಸ್ಥಿಮಿತ’ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನಡ್ಡಾ ಅವರ ಹೇಳಿಕೆಯು ರಾಜ್ಯಸಭೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿತು. ಹಿರಿಯ ನಾಯಕರಾದ ಖರ್ಗೆ ಅವರ ವಿರುದ್ಧ ಆಕ್ಷೇಪಾರ್ಹ ಪದ ಸಲ್ಲ ಎಂದ ವಿರೋಧ ಪಕ್ಷದವರು, ಕ್ಷಮೆಯಾಚಿಸುವಂತೆ ನಡ್ಡಾ ಅವರಿಗೆ ಒತ್ತಾಯಿಸಿದ್ದಾರೆ.

‘ಎನ್‌ಡಿಎ ಸರ್ಕಾರದಲ್ಲಿ ನಾನು ಗೌರವಿಸುವ ಮೂವರು ಸಚಿವರಲ್ಲಿ ನಡ್ಡಾ ಕೂಡ ಒಬ್ಬರು. ಆದರೆ, ಅವರು ನನ್ನನ್ನು ‘ಮಾನಸಿಕ’ ವ್ಯಕ್ತಿ ಎಂದು ಕರೆದಿದ್ದಾರೆ. ಇದು ನಾಚಿಕೆಗೇಡಿನ ವಿಷಯ. ಅವರು ಕ್ಷಮೆಯಾಚಿಸಬೇಕು’ ಎಂದು ಖರ್ಗೆ ಆಗ್ರಹಿಸಿದ್ದಾರೆ.

ಇದರ ಬೆನ್ನಲ್ಲೇ ನಡ್ಡಾ ಕ್ಷಮೆಯಾಚಿಸಿದ್ದಾರೆ.

‘ನಾನು ಈಗಾಗಲೇ ನನ್ನ ಮಾತುಗಳನ್ನು ಹಿಂದಕ್ಕೆ ಪಡೆದುಕೊಂಡಿದ್ದೇನೆ. ಆದರೆ, ಖರ್ಗೆ ಅವರು ತಮ್ಮ ಮಿತಿಗಳನ್ನು ಮೀರಿ ಪ್ರಧಾನಿಯವರ ವಿರುದ್ಧ ಭಾವೋದ್ರೇಕದಿಂದ ಟೀಕೆಗಳನ್ನು ಮಾಡಿದ್ದಾರೆ. ಅದನ್ನು ಕಡತದಿಂದ ತೆಗೆದುಹಾಕಬೇಕು’ ಎಂದು ನಡ್ಡಾ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.