ADVERTISEMENT

ಇ.ಸಿ ಮೇಲೆ ಒತ್ತಡ, ಅದರ ಸ್ವಾತಂತ್ರ್ಯ ರಕ್ಷಿಸುವುದು ನಮ್ಮ ಜವಾಬ್ದಾರಿ: ಖರ್ಗೆ

ಪಿಟಿಐ
Published 25 ಜನವರಿ 2026, 14:45 IST
Last Updated 25 ಜನವರಿ 2026, 14:45 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ‘ಈಚೆಗಿನ ದಿನಗಳಲ್ಲಿ ಚುನಾವಣಾ ಆಯೋಗದಂತಹ (ಇ.ಸಿ) ಸಂಸ್ಥೆಗಳು ನಿರಂತರ ಒತ್ತಡವನ್ನು ಎದುರಿಸುತ್ತಿದ್ದು, ಅವುಗಳ ಸ್ವಾತಂತ್ರ್ಯವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದರು.

ರಾಷ್ಟ್ರೀಯ ಮತದಾರರ ದಿನ ಅಂಗವಾಗಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮತ ಕಳ್ಳತನ’ ಮತ್ತು ಪೂರ್ವಸಿದ್ಧತೆಯಿಲ್ಲದ ಎಸ್‌ಐಆರ್ ಮೂಲಕ ‘ಮತದಾನದ ಹಕ್ಕು’ ಕಸಿದುಕೊಳ್ಳುವುದು ಭಾರತವು ಬಹುಕಾಲದಿಂದ ಪಾಲಿಸಿಕೊಂಡು ಬಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿ ಪರಿಣಮಿಸಿದೆ ಎಂದರು.

‘ಭಾರತದ ಜನರು ಮುಕ್ತ, ನ್ಯಾಯಯುತ ಮತ್ತು ನಿರ್ಭೀತ ಚುನಾವಣೆಗೆ ಅರ್ಹರಾಗಿದ್ದಾರೆ. ಇಲ್ಲಿ, ಮತದಾರರ ಪಟ್ಟಿಯು ದೋಷರಹಿತವಾಗಿರಬೇಕಾದುದು ಪ್ರಾಥಮಿಕ ಅವಶ್ಯಕತೆಯಾಗಿದೆ’ ಎಂದು ಹೇಳಿದರು.

ADVERTISEMENT

‘ಚುನಾವಣಾ ಆಯೋಗದ ಸ್ವಾತಂತ್ರ್ಯ ಮತ್ತು ಸಮಗ್ರತೆಯನ್ನು ರಕ್ಷಿಸುವುದು ನಮ್ಮೆಲ್ಲರ ಬಲುದೊಡ್ಡ ಜವಾಬ್ದಾರಿಯಾಗಿದೆ. ಇದರಿಂದ ಪ್ರಜಾಪ್ರಭುತ್ವವು ಕೇವಲ ಉಳಿಯುವುದಲ್ಲದೆ, ನಿಜವಾಗಿಯೂ ಅಭಿವೃದ್ಧಿ ಹೊಂದುತ್ತದೆ’ ಎಂದು ಅಭಿಪ್ರಾಯಪಟ್ಟರು. 

ಚುನಾವಣಾ ಆಯೋಗವನ್ನು 1950ರ ಜನವರಿ 25ರಂದು ಸ್ಥಾಪಿಸಲಾಗಿದ್ದು, ಕಳೆದ 16 ವರ್ಷಗಳಿಂದ ಆ ದಿನವನ್ನು ‘ರಾಷ್ಟ್ರೀಯ ಮತದಾರರ ದಿನ’ವಾಗಿ ಆಚರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.