ADVERTISEMENT

ಭಿನ್ನಮತ: ಖರ್ಗೆ ‘ಕೈ’ ತಪ್ಪಿದ ಪಟ್ಟ, ಈಡೇರದ ಸೋನಿಯಾ ಭರವಸೆ

ಅಜಿತ್ ಅತ್ರಾಡಿ
Published 12 ಆಗಸ್ಟ್ 2019, 1:46 IST
Last Updated 12 ಆಗಸ್ಟ್ 2019, 1:46 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಕಾಂಗ್ರೆಸ್‌ ಪಕ್ಷದಲ್ಲಿನ ಹಿರಿಯರು ಮತ್ತು ಕಿರಿಯರ ನಡುವಣ ಭಿನ್ನಾಭಿಪ್ರಾಯಗಳಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷ ಪಟ್ಟ ಕೈತಪ್ಪಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ರಾಜೀನಾಮೆ ನೀಡಿದ ಬಳಿಕ, ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಖರ್ಗೆ ಅವರನ್ನು ಕರೆಯಿಸಿಕೊಂಡು ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧವಾಗಿರುವಂತೆ ಸೂಚಿಸಿದ್ದರು. ಖರ್ಗೆ ಸಹ ಸಮ್ಮತಿ ಸೂಚಿಸಿದ್ದರು.

ಇದೇ ವೇಳೆ, ತಮಿಳುನಾಡಿನಿಂದ ರಾಜ್ಯಸಭೆಗೆ ಖರ್ಗೆ ಅವರನ್ನು ಆಯ್ಕೆ ಮಾಡಲು ಸೋನಿಯಾ ಗಾಂಧಿ ಪ್ರಯತ್ನ ನಡೆಸಿದರು. ಆದರೆ, ಈ ಕಾರ್ಯ ವಿಫಲವಾಯಿತು. ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ವಿವಾದ ಇರುವುದರಿಂದ ರಾಜ್ಯಸಭೆಗೆ ಕರ್ನಾಟಕದ ನಾಯಕನನ್ನು ಆಯ್ಕೆ ಮಾಡಲು ಡಿಎಂಕೆ ಒಪ್ಪಿಕೊಳ್ಳಲಿಲ್ಲ.

ADVERTISEMENT

ಪಕ್ಷಕ್ಕೆ ತೋರಿದ ನಿಷ್ಠೆ ಮತ್ತು ಹಿಂದಿನ ಲೋಕಸಭೆಯಲ್ಲಿ ಪಕ್ಷದ ನಾಯಕನಾಗಿ ಉತ್ತಮ ಕಾರ್ಯನಿರ್ವಹಣೆ ಹಾಗೂ ದಲಿತ ನಾಯಕರಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅತ್ಯುತ್ತಮ ಆಯ್ಕೆ ಎಂದು ಸೋನಿಯಾ ಪರಿಗಣಿಸಿದ್ದರು.

ಆದರೆ, ಪಕ್ಷದ ಮುಂದಿನ ಅಧ್ಯಕ್ಷ ಸ್ಥಾನದ ಆಯ್ಕೆ ಕುರಿತು ಚರ್ಚೆ ನಡೆಸಿದ ಐದು ಗುಂಪುಗಳಲ್ಲಿ ಹೆಚ್ಚಿನ ಸಂಖ್ಯೆಯ ನಾಯಕರು ರಾಹುಲ್‌ ಗಾಂಧಿ ಅವರ ಹೆಸರನ್ನು ಸೂಚಿಸಿದ್ದರು. ರಾಹುಲ್‌ ಒಪ್ಪದಿದ್ದರೆ ಖರ್ಗೆ ಅವರನ್ನು ಆಯ್ಕೆ ಮಾಡಲು ಬಹುತೇಕ ನಾಯಕರು ಒಲವು ತೋರಿದ್ದರು. ಬೆರಳಣಿಕೆಯಷ್ಟು ಮಂದಿ ಮಾತ್ರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್‌ ವಾಸ್ನಿಕ್‌ ಅವರಿಗೆ ಬೆಂಬಲ ಸೂಚಿಸಿದ್ದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಹ ಮೂವರು ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುಕುಲ್‌ ವಾಸ್ನಿಕ್‌ ಮತ್ತು ಸುಶೀಲ್‌ ಕುಮಾರ್ ಶಿಂಧೆ ಅವರನ್ನೊಳಗೊಂಡ ಪಟ್ಟಿಯನ್ನು ಸಿದ್ಧಪಡಿಸಿತ್ತು. ಹೀಗಾಗಿ, ಖರ್ಗೆ ಅವರ ಹೆಸರು ಅಂತಿಮಗೊಳಿಸುವ ಹಂತದಲ್ಲಿದ್ದಾಗ, ಕೇಂದ್ರದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆಕ್ಷೇಪ ವ್ಯಕ್ತಪಡಿಸಿ, ಯುವ ನಾಯಕರ ಜತೆಯೂ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದರು.

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಸಹ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಯುವಕರಿಗೆ ನೀಡುವಂತೆ ಟ್ವೀಟ್‌ ಮಾಡಿದರು. ಈ ಮೂಲಕ ಸಿಂಧಿಯಾ ಮತ್ತು ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ಗೆ ಬೆಂಬಲ ಸೂಚಿಸಿದರು.

ಈ ರೀತಿ ಪರ–ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ ಕಾರ್ಯಕಾರಿ ಸಮಿತಿಯ ಕೆಲವು ಸದಸ್ಯರು, ಖರ್ಗೆ ಅವರಿಗೆ ವಯಸ್ಸಾಗಿದ್ದು, ದೇಶದಾದ್ಯಂತ ಸಂಚರಿಸುವುದು ಕಷ್ಟಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಗುಂಪು ಮುಕುಲ್‌ ವಾಸ್ನಿಕ್‌ ಪರ ಪ್ರಯತ್ನಗಳನ್ನು ನಡೆಸಿತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ಬೆಂಬಲ ದೊರೆಯಲಿಲ್ಲ.

ಅಂತಿಮವಾಗಿ ಹಿರಿಯರು ಮತ್ತು ಕಿರಿಯರ ನಡುವೆ ಒಮ್ಮತ ಮೂಡದ ಕಾರಣ ಖರ್ಗೆ ಬದಲು ಸೋನಿಯಾ ಗಾಂಧಿ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಕಾರ್ಯಕಾರಿ ಸಮಿತಿ ಶನಿವಾರ ರಾತ್ರಿ ಆಯ್ಕೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.