ADVERTISEMENT

ನುಸುಳುಕೋರರಿಗೆ BSF ನೆರವು ಆರೋಪ | ಭದ್ರತಾ ಪಡೆಗೆ ಅವಮಾನ; ಮಮತಾಗೆ ಸುವೇಂದು

ಪಿಟಿಐ
Published 5 ಜನವರಿ 2025, 13:56 IST
Last Updated 5 ಜನವರಿ 2025, 13:56 IST
ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ 
ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ    

ಕೋಲ್ಕತ್ತ: ನುಸುಳುಕೋರರಿಗೆ ರಾಜ್ಯ ಪ್ರವೇಶಿಸಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ನೆರವಾಗುತ್ತಿದೆ ಎಂಬ ಆರೋಪವನ್ನು ಟೀಕಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ. ಹೇಳಿಕೆಯು ಭದ್ರತಾ ಪಡೆಗಳಿಗೆ ಮಾಡಿರುವ ಅವಮಾನವಾಗಿದೆ ಎಂದು ಹೇಳಿದ್ದಾರೆ.

ಅಕ್ರಮ ವಲಸೆಯನ್ನು ತಡೆಗಟ್ಟಲು ಬಿಜೆಪಿ ಆಡಳಿತದ ಅಸ್ಸಾಂ ಸರ್ಕಾರ ಭದ್ರತಾ ಪಡೆಗಳೊಂದಿಗೆ ಕೆಲಸ ಮಾಡಿದೆ. ಆದರೆ, ಪಶ್ಚಿಮ ಬಂಗಾಳ ಸರ್ಕಾರ ನುಸುಳುಕೋರರನ್ನು ಮತ ಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಬ್ಯಾನರ್ಜಿ ತಮ್ಮ ಮತ ಬ್ಯಾಂಕ್‌ ಅನ್ನು ಸಮಾಧಾನಪಡಿಸಲು ಕೆಳಮಟ್ಟದ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿ ಆರೋಪಿಸಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದ ಒಳನುಸುಳುವಿಕೆಗೆ ಗಡಿ ಭದ್ರತಾ ಪಡೆಯನ್ನು ದೂಷಿಸುವುದು ‘ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 75,000 ಸಿಬ್ಬಂದಿ ಮತ್ತು ಬಂಗಾಳದಲ್ಲಿರುವ 33,000 ಬಿಎಸ್‌ಎಫ್ ಸಿಬ್ಬಂದಿಗೆ ಮಾಡಿದ ಅವಮಾನ’ ಎಂದು ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜಕೀಯದಲ್ಲಿ ಆರೋಪಗಳು ಮತ್ತು ಪ್ರತ್ಯಾರೋಪಗಳು ನಡೆಯುತ್ತವೆ. ಆದರೆ, ಭದ್ರತಾ ಪಡೆಗಳನ್ನು ಅದರೊಳಗೆ ಎಳೆದುಕೊಳ್ಳುವುದು, ಅವರನ್ನು ಅವಮಾನಿಸುವುದು ಮತ್ತು ನಿಮ್ಮ ವೈಫಲ್ಯಗಳ ಹೊಣೆಯನ್ನು ಅವರಿಗೆ ವರ್ಗಾಯಿಸುವುದು ಕೀಳು ರಾಜಕೀಯವಲ್ಲದೆ ಬೇರೇನೂ ಅಲ್ಲ’ ಎಂದು ಬ್ಯಾನರ್ಜಿಗೆ ಪತ್ರದಲ್ಲಿ ಅಧಿಕಾರಿ ಬರೆದಿದ್ದಾರೆ.

ಗಡಿ ಸಂಬಂಧಿತ ವಿಷಯಗಳಲ್ಲಿ ಬಿಎಸ್‌ಎಫ್‌ನೊಂದಿಗಿನ ಅಸಹಕಾರಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರವನ್ನು ಸುವೇಂದು ಅಧಿಕಾರಿ ದೂಷಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಸುವ ದುರುದ್ದೇಶದಿಂದ ನುಸುಳುಕೋರರಿಗೆ ರಾಜ್ಯ ಪ್ರವೇಶಿಸಲು ಗಡಿ ಭದ್ರತಾ ಪಡೆ (BSF) ನೆರವಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ಆರೋಪ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.