ADVERTISEMENT

BJP ಅನುಕೂಲಕ್ಕಾಗಿ SIR ಎಂದ ಮಮತಾ ಬ್ಯಾನರ್ಜಿ: ತಿರುಗೇಟು ನೀಡಿದ ಅಮಿತ್ ಶಾ

ಪಿಟಿಐ
Published 2 ಮಾರ್ಚ್ 2026, 18:53 IST
Last Updated 2 ಮಾರ್ಚ್ 2026, 18:53 IST
ಅಮಿತ್ ಶಾ ಮತ್ತು ಮಮತಾ ಬ್ಯಾನರ್ಜಿ
ಅಮಿತ್ ಶಾ ಮತ್ತು ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಕಲ್ಪಿಸಲು  ರಾಜ್ಯದ ಮತದಾರರ ಪಟ್ಟಿಯಿಂದ 63.66 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಹೆಸರಿನಲ್ಲಿ ಮತದಾರರನ್ನು ಕೈಬಿಡುತ್ತಿರುವುದರ ಹಿಂದೆ ಚುನಾವಣಾ ಆಯೋಗ– ಬಿಜೆಪಿಯ ಹುನ್ನಾರವಿದೆ ಎಂದು ಸೋಮವಾರ ಇಲ್ಲಿ ಆರೋಪಿಸಿದರು.

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಫೆ. 28ರಂದು ಆಯೋಗವು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ‘ಪಟ್ಟಿಯಿಂದ ಮತದಾರರ ಹೆಸರನ್ನು ಕೈಬಿಟ್ಟಿರುವುದು ಉದ್ದೇಶಪೂರ್ವಕ ಹಾಗೂ ಅಮಾನವೀಯ ಕೃತ್ಯ’ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಅರ್ಹತೆಯಿಂದ ಚುನಾವಣೆ ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ ಎಂಬ ಕಾರಣದಿಂದ ಟಿಎಂಸಿ ಬೆಂಬಲಿಗರನ್ನು ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ತಾವು ಸ್ಪರ್ಧಿಸಲಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಮಲ ಪಾಳಯದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ’ ಎಂದೂ ಅವರು ಹೇಳಿದರು.

ಎಸ್‌ಐಆರ್‌ನಿಂದ ಮಮತಾಗೆ ಆತಂಕ: ಅಮಿತ್ ಶಾ

ಮಥುರಾಪುರ: ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಳನುಸುಳುಕೋರರನ್ನು ಹೊರಹಾಕುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಲ್ಲಿ ಹೇಳಿದರು.

‘ಎಸ್‌ಐಆರ್‌ ಪ್ರಕ್ರಿಯೆ ಮೂಲಕ ಈಗಾಗಲೇ ಮತದಾರರ ಪಟ್ಟಿಯಿಂದ ಒಳನುಸುಳುಕೋರರನ್ನು ಹೊರಹಾಕಲಾಗಿದೆ. ಇದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಲ್ಲಿ ಆತಂಕ ಸೃಷ್ಟಿಸಿದೆ’ ಎಂದರು.

‘ಆಡಳಿತಾರೂಢ ಟಿಎಂಸಿಯು ಪಶ್ಚಿಮ ಬಂಗಾಳವನ್ನು ಒಳನುಸುಳುಕೋರರ ಪಾಲಿನ ಸ್ವರ್ಗವನ್ನಾಗಿ ಮಾಡಿದೆ’ ಎಂದು ದೂರಿದ ಕೇಂದ್ರ ಗೃಹ ಸಚಿವರು ‘ಗಡಿ ರಾಜ್ಯಕ್ಕೆ ಬಿಜೆಪಿ ಮಾತ್ರ ಭದ್ರತೆ ಒದಗಿಸಬಲ್ಲದು’ ಎಂದು ಹೇಳಿದರು.

‘ಬದಲಾವಣೆ ಎಂದರೆ... ಗಡಿಯ ಭದ್ರಪಡಿಸುವಿಕೆ ನೇಮಕಾತಿಯಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೊಳಿಸುವುದು ಮಹಿಳೆಯರ ಸುರಕ್ಷತೆ’ ಎಂದು ಶಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.